ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದಿಂದಾಗಿ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ.
ವಾಂಖೆಡೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಹಾರ್ದಿಕ್ ಬಳಗ ಹೀನಾಯ ಸೋಲನುಭವಿಸಿದೆ. ಕೆಕೆಆರ್ ನೀಡಿದ್ದ 170 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ, ಶ್ರೇಯಸ್ ಪಡೆಯ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ 18.5 ಓವರ್ಗಳಲ್ಲಿ 145ಕ್ಕೆ ಸರ್ವಪತನ ಕಂಡಿತು. ಸೂರ್ಯ ಕುಮಾರ್ ಯಾದವ್ (56), ಟಿಮ್ ಡೇವಿಡ್ (24) ಹೊರತು ಪಡಿಸಿ ಯಾವೊಬ್ಬ ಬ್ಯಾಟರ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ 24 ರನ್ಗಳಿಂದ ಮುಂಬೈ ಸೋಲೊಪ್ಪಿಕೊಂಡಿತು.
ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು 8ರಲ್ಲಿ ಸೋಲನ್ನು ಕಂಡು ಟ್ರೋಫಿ ಗೆಲ್ಲುವ ಕನಸನ್ನೂ ಕೈಚೆಲ್ಲಿತು. ಕೋಲ್ಕತ್ತಾ ಪರ ಸ್ಟಾರ್ಕ್ 4 ವಿಕೆಟ್ ಕಿತ್ತರೆ, ವರುಣ್ ಚಕ್ರವರ್ತಿ, ಸುನಿಲ್ ನರೈನೆ, ರಸ್ಸೆಲ್ ತಲಾ 2 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 19.5 ಓವರ್ಗಳಲ್ಲಿ 169 ರನ್ಗಳಿಗೆ ಆಲೌಟ್ ಆಯಿತು. 57 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ವೆಂಕಟೇಶ್ ಅಯ್ಯರ್ ಆಸರೆಯಾದರು. 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 70 ರನ್ ಚಚ್ಚಿ ಹೈಸ್ಕೋರರ್ ಎನಿಸಿಕೊಂಡರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್ಗೆ ಬಂದ ಮನೀಶ್ ಪಾಂಡೆ ಕೂಡ 42 ರನ್ಗಳ ಕೊಡುಗೆ ನೀಡಿದರು. 31 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು.
ವೆಂಕಟೇಶ್ ಮತ್ತು ಮನೀಶ್ ಆರನೇ ವಿಕೆಟ್ಗೆ 83 ರನ್ಗಳ ಜೊತೆಯಾಟವಾಡಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಮತ್ತು ನುವಾನ್ ತುಷಾರ ತಲಾ 3 ವಿಕೆಟ್ ಪಡೆದರೇ, ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಕಿತ್ತರು.
ಪಂದ್ಯದ ದಾಖಲೆಗಳು
12 ವರ್ಷಗಳ ಬಳಿಕ ಕೆಕೆಆರ್ಗೆ ಗೆಲುವು: ವಾಂಖೆಡೆ ಮೈದಾನದಲ್ಲಿ ಕೆಕೆಆರ್ ತಂಡ 12 ವರ್ಷಗಳ ಬಳಿಕ ಗೆಲುವು ಸಾಧಿಸಿತು. 2012ರಲ್ಲಿ ಮೊದಲ ಬಾರಿಗೆ ಈ ಮೈದಾನದಲ್ಲಿ ಕೆಕೆಆರ್ ಗೆಲುವು ಸಾಧಿಸಿತ್ತು.
4ನೇ ಬಾರಿಗೆ ಎರಡೂ ತಂಡಗಳು ಆಲೌಟ್: ಈ ಪಂದ್ಯದಲ್ಲಿ ಎರಡೂ ತಂಡಗಳು ಆಲೌಟ್ ಆಗಿದ್ದು ಇದು ಐಪಿಎಲ್ ಇತಿಹಾಸದಲೇ 4ನೇ ಬಾರಿಗೆ ಪಂದ್ಯ ಒಂದರಲ್ಲಿ ಎರಡೂ ತಂಡಗಳು ಆಲೌಟ್ ಆಗಿವೆ. ಇದಕ್ಕೂ ಮೊದಲು 2010, 2017 ಮತ್ತು 2018ರಲ್ಲಿ ಈ ದಾಖಲೆಯಾಗಿತ್ತು.