ಕೋಲ್ಕತ್ತಾ: ಐಪಿಎಲ್ನಲ್ಲಿ ಅತಿ ಕಳಪೆ ಬೌಲಿಂಗ್ ಪಡೆಯನ್ನು ಹೊಂದಿರುವ ಆರ್ಸಿಬಿ, ಕೆಕೆಆರ್ ವಿರುದ್ಧ ಮತ್ತೆ ಹಿನ್ನಡೆ ಅನುಭವಿಸಿತು. ಫಿಲಿಪ್ ಸಾಲ್ಟ್ರ ಸ್ಫೋಟಕ ಬ್ಯಾಟಿಂಗ್, ನಾಯಕ ಶ್ರೇಯಸ್ ಅಯ್ಯರ್ ಅಮೂಲ್ಯ ಅರ್ಧಶತಕದ ಬಲದಿಂದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 222 ರನ್ ಗಳಿಸಿತು.
ಕೆಕೆಆರ್ ತಂಡದ ತವರಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ಕೀಪರ್ ಸಾಲ್ಟ್ ಅಬ್ಬರಿಸಿದರು. ಮೊದಲ ಪವರ್ಪ್ಲೇಯನ್ನು ಬಳಸಿಕೊಂಡ ಬ್ಯಾಟರ್ 3 ಸಿಕ್ಸರ್, 7 ಬೌಂಡರಿ ಸಮೇತ 14 ಎಸೆತಗಳಲ್ಲಿ 48 ರನ್ ಗಳಿಸಿದರು. ಲೂಕಿ ಫರ್ಗ್ಯುಸನ್ ಬೌಲಿಂಗ್ನಲ್ಲಿ 6,4,4,6,4,4 ರನ್ ಬಾರಿಸಿ ಕಿಕ್ಸ್ಟಾರ್ಟ್ ನೀಡಿದರು.
ಅಪಾಯಕಾರಿ ಆಗಲಿದ್ದಾರೆಂದು ಭಾವಿಸಿದ್ದ ಸುನಿಲ್ ನರೈನ್ 10, ಅಂಗ್ಕೃಷ್ಣ ರಘುವಂಶಿ 3, ವೆಂಕಟೇಶ್ ಅಯ್ಯರ್ 16 ರನ್ಗೆ ವಿಕೆಟ್ ನೀಡಿದರು. ಇದರಿಂದ ತುಸು ಚೇತರಿಸಿಕೊಂಡು ಆರ್ಸಿಬಿ ಮರು ಹೋರಾಟ ನೀಡಲಿದೆ ಎಂದು ಭಾವಿಸಲಾಗಿತ್ತು. ಆದರೆ, ಬಳಿಕ ಬಂದ ಬ್ಯಾಟರ್ಗಳು ಮತ್ತೆ ತಂಡಕ್ಕೆ ಆಸರೆಯಾಗಿ ನಿಂತರು.
ಅಯ್ಯರ್ ಅರ್ಧಶತಕ: 97 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಬಂದ ಶ್ರೇಯಸ್ ಅಯ್ಯರ್ ಉತ್ತಮ ಇನಿಂಗ್ಸ್ ಕಟ್ಟಿದರು. 36 ಎಸೆತಗಳಲ್ಲಿ 50 ರನ್ ಬಾರಿಸಿದರು. ಅಗತ್ಯವಾದ ಸಂದರ್ಭದಲ್ಲಿ ಉತ್ತಮ ಬ್ಯಾಟ್ ಮಾಡಿ ತಂಡವನ್ನು ಆಧರಿಸಿದರು. ರಿಂಕು ಸಿಂಗ್ 16 ಎಸೆತಗಳಲ್ಲಿ 24, ಸಿಡಿಲಮರಿ ಆ್ಯಂಡ್ರೆ ರಸೆಲ್ 27, ರಮಣ್ದೀಪ್ ಸಿಂಗ್ 24 ರನ್ ಗಳಿಸಿದರು. ಇದರಿಂದ ತಂಡ ನಿಗದಿತ ಓವರ್ನಲ್ಲಿ 222 ರನ್ ಗಳಿಸಿತು.
ಬೌಲಿಂಗ್ ಪಡೆ ಮತ್ತೆ ಉಡೀಸ್: ಆರ್ಸಿಬಿ ತಂಡಕ್ಕೆ ಈ ಬಾರಿ ಕಂಟಕವಾಗಿದ್ದು, ಬೌಲಿಂಗ್ ಪಡೆ. ಏನೇ ಬದಲಾವಣೆ ಮಾಡಿದರೂ ಬೌಲಿಂಗ್ನಲ್ಲಿ ಸುಧಾರಣೆ ಕಾಣುತ್ತಿಲ್ಲ. ಯಶ್ ದಯಾಳ್, ಕ್ಯಾಮರೂನ್ ಗ್ರೀನ್ ತಲಾ 2 ವಿಕೆಟ್ ಪಡೆದರೆ, ಲೂಕಿ ಫರ್ಗ್ಯುಸನ್, ಮೊಹಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು. ಯಶ್ 56, ಲೂಕಿ 47 ರನ್ ಚಚ್ಚಿಸಿಕೊಂಡು ಮತ್ತೆ ದುಬಾರಿಯಾದರು.
ಆರ್ಸಿಬಿಯಲ್ಲಿ ಮೂರು ಬದಲಾವಣೆ: ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲ್ಲಿರುವ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲಲು ಮೂರು ಬದಲಾವಣೆ ಮಾಡಿದೆ. ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ಮೊಹಮದ್ ಸಿರಾಜ್, ಕರಣ್ ಶರ್ಮಾರಿಗೆ ಅವಕಾಶ ನೀಡಲಾಗಿದೆ. ಕೋಲ್ಕತ್ತಾ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕೋಲ್ಕತ್ತಾ ನೈಟ್ ರೈಡರ್ಸ್: ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಆಂಗ್ಕೃಷ್ಣ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಕರಣ್ ಶರ್ಮಾ, ಲೂಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: 18 ಎಸೆತ, 5 ಬೌಂಡರಿ, 7 ಸಿಕ್ಸರ್! ಡೆಲ್ಲಿ ಪರ ಜೇಕ್ ಫ್ರೇಸರ್ ಸ್ಫೋಟಕ ಬ್ಯಾಟಿಂಗ್ - Jake Fraser Fastest Fifty