ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸೀಸನ್ನಲ್ಲಿ ಮಿಂಚು ಹರಿಸುತ್ತಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ದಾಖಲಿಸಿ ಗಮನ ಸೆಳೆದರು.
ಈ ಹಿಂದೆ, ಲಿಸ್ಟ್-ಎ ಕ್ರಿಕೆಟ್ನಲ್ಲಿ 29 ಎಸೆತಗಳಲ್ಲಿ ವೇಗದ ಶತಕ ಗಳಿಸಿದ್ದ ಉದಯೋನ್ಮುಖ ಆಸ್ಟ್ರೇಲಿಯಾದ ಆಟಗಾರ ಮೆಕ್‌ಗುರ್ಕ್, ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸ್ಫೋಟಕ ಇನಿಂಗ್ಸ್ ಆಡಿದರು. ಕೇವಲ 18 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್‌ಗಳೊಂದಿಗೆ 65 ರನ್ ಚಚ್ಚಿದರು. 361.11 ರನ್ ಸ್ಟ್ರೈಕ್ ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದ್ದಾರೆ.
ಹೈದರಾಬಾದ್ ನೀಡಿದ್ದ 267 ರನ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲಿ ಆರಂಭಿಕ ಆಟಗಾರರನ್ನು ಕಳೆದುಕೊಂಡಿತು. ನಂತರ ಕ್ರೀಸಿಗೆ ಬಂದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರು ವಾಷಿಂಗ್ಟನ್ ಸುಂದರ್ ಎಸೆದ ಒಂದೇ ಓವರ್‌ನಲ್ಲಿ 30 ರನ್ ಪೇರಿಸಿದರು. ಮೂರನೇ ಓವರ್‌ನಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಬೆವರಿಳಿಸಿದರು.
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರವಾಗಿ ಸಿಡಿಸಿದ ಅತ್ಯಂತ ವೇಗದ ಅರ್ಧ ಶತಕ ಇದಾಗಿದೆ. ಗುಜರಾತ್ ಲಯನ್ಸ್ ವಿರುದ್ಧ 2016ರಲ್ಲಿ ಕ್ರಿಸ್ ಮೋರಿಸ್ 17 ಎಸೆತಗಳ ಅರ್ಧಶತಕವನ್ನು ಫ್ರೇಸರ್ ಹಿಂದಿಕ್ಕಿದರು. ಇದು ಮೂರನೇ ವೇಗದ ಐಪಿಎಲ್ ಅರ್ಧ ಶತಕವೆಂದು ದಾಖಲಾಗಿದೆ.
ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ರಾಜಸ್ಥಾನ್ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ್ದರು. ಮೆಕ್‌ಗುರ್ಕ್ ಈ ಋತುವಿನಲ್ಲಿ ಅತ್ಯಂತ ವೇಗವಾಗಿ ಅರ್ಧ ಶತಕ ದಾಖಲಿಸಿದ್ದಾರೆ. ಇದುವರೆಗಿನ ಐಪಿಎಲ್ನ ಮೂರು ಪಂದ್ಯಗಳಲ್ಲಿ ಮೆಕ್‌ಗುರ್ಕ್ 46.66 ಸರಾಸರಿ ಮತ್ತು 222.22 ಸ್ಟ್ರೈಕ್ ರೇಟ್‌ನಲ್ಲಿ 140 ರನ್ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 65 ಆಗಿದೆ. ಲಕ್ನೋ ಸೂಪರ್ ವಿರುದ್ಧ 55 ರನ್ ಕಲೆ ಹಾಕಿದ್ದರು.