ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಪ್ರಸಕ್ತ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವಿನ ಖಾತೆ ತೆರೆದಿದೆ. ಸೋಮವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 176 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, ನಿಗದಿತ 19.2 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 4 ವಿಕೆಟ್‌ಗಳಿಂದ ರೋಚಕ ಗೆಲುವು ಪಡೆಯಿತು.
ವಿರಾಟ್ ಕೊಹ್ಲಿ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಒಂದು ಹಂತದಲ್ಲಿ ಪಂದ್ಯ ಪಂಜಾಬ್ ಕಡೆಗೆ ಸಾಗುತ್ತಿರುವಂತೆ ಭಾಸವಾಯಿತಾದರೂ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ಪಂಜಾಬ್ ಕೈಯಿಂದ ಗೆಲುವನ್ನು ಕಸಿದುಕೊಂಡರು. ಈ ಮೂಲಕ ಫಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಈ ಋತುವಿನಲ್ಲಿ ಮೊದಲ ಜಯಭೇರಿ ಬಾರಿಸಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲು ಕಂಡಿತ್ತು.
ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ (45), ಪ್ರಭ್ಸಿಮ್ರಾನ್ (25), ಸ್ಯಾಮ್ ಕರ್ರನ್ (23), ಜಿತೇಶ್ ಶರ್ಮಾ (27), ಶಶಾಂಕ್ ಸಿಂಗ್ (21) ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ ತಂಡ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಆರ್‌ಸಿಬಿ ತಂಡದ 'ಚೇಸ್ ಮಾಸ್ಟರ್' ವಿರಾಟ್ ಕೊಹ್ಲಿ (77) ಬಿರುಸಿನ ಅರ್ಧಶತಕ, ರಜತ್ ಪಾಟೀದಾರ್ (18), ದಿನೇಶ್ ಕಾರ್ತಿಕ್ (28*), ಮಹಿಪಾಲ್ ಲೆಮ್ರಾರ್ (17*) ಬ್ಯಾಟಿಂಗ್ ಸಹಾಯದಿಂದ 19.2 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡ 6ನೇ ಸ್ಥಾನಕ್ಕೆ ತಲುಪಿದರೆ ಪಂಜಾಬ್ ಕಿಂಗ್ಸ್ 5ನೇ ಸ್ಥಾನದಲ್ಲಿದೆ.
ಚಿನ್ನಸ್ವಾಮಿಯಲ್ಲಿ ಕೊಹ್ಲಿ ದಾಖಲೆ: ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಪೂರೈಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣವೊಂದರಲ್ಲೇ ಐಪಿಎಲ್ನಲ್ಲಿ 25ನೇ ಅರ್ಧಶತಕ ಸಿಡಿಸಿರುವ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಪಟ್ಟಿಯಲ್ಲಿ ವಾರ್ನರ್ ಎರಡನೇ ಸ್ಥಾನದಲ್ಲಿದ್ದು ಇವರು ಹೈದರಾಬಾದ್ನ ಮೈದಾನದಲ್ಲಿ 18 ಬಾರಿ ಫಿಫ್ಟಿ ಬಾರಿಸಿದ್ದಾರೆ. ಉಳಿದಂತೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿಡಿ 16, ವಾಂಖೆಡೆಯಲ್ಲಿ ರೋಹಿತ್ ಶರ್ಮಾ 15 ಬಾರಿ ಈ ಸಾಧನೆ ಮಾಡಿದ್ದಾರೆ.
ಟಿ20ಯಲ್ಲಿ 100ನೇ ಫಿಫ್ಟಿ: ನಿನ್ನೆಯ ಪಂದ್ಯದಲ್ಲಿ 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 100ನೇ ಬಾರಿಗೆ 50+ ಸ್ಕೋರ್ ಮಾಡಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು. ಈ ಸಾಧನೆ ಮಾಡಿದ ಮೊದಲನೇ ಭಾರತೀಯ ಮತ್ತು ವಿಶ್ವದ ಮೂರನೇ ಬ್ಯಾಟರ್ ಎಂಬ ಮೈಲಿಗಲ್ಲು ತಲುಪಿದರು.
174ನೇ ಕ್ಯಾಚ್ ಪಡೆದ ಕೊಹ್ಲಿ: ಇದೇ ಪಂದ್ಯದಲ್ಲಿ ಎರಡು ಕ್ಯಾಚ್ ಪಡೆದ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 174ನೇ ಕ್ಯಾಚ್ ಪಡೆದ ಸಾಧನೆಗೈದರು. ಇದರೊಂದಿಗೆ ಅತೀ ಹೆಚ್ಚು ಕ್ಯಾಚ್ ಪಡೆದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಸುರೇಶ್ ರೈನಾ 172 ಕ್ಯಾಚ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಐಪಿಎಲ್ 2024: ಮೇ 26 ರಂದು ಚೆನ್ನೈನಲ್ಲಿ ಫೈನಲ್ ಸೇರಿ ಬಾಕಿ ಪಂದ್ಯಗಳ ವೇಳಾಪಟ್ಟಿ ಪ್ರಕಟ - ipl 2024