ಚೆನ್ನೈ(ತಮಿಳುನಾಡು): ಸೋಲಿನೊಂದಿಗೆ ಪ್ರಸಕ್ತ ಸಾಲಿನ IPL ಅಭಿಯಾನ ಆರಂಭಿಸಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ, ಬಳಿಕ ಸತತ ಗೆಲುವಿನೊಂದಿಗೆ ಭರ್ಜರಿ ಕಂಬ್ಯಾಕ್ ಮಾಡಿದೆ. ತಂಡದ ಆಟಗಾರರು ಹಿಂದೆಂದೂ ಕಾಣದ ರೀತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇನ್ನೊಂದೆಡೆ, ಏಳು-ಬೀಳುಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿರುವ ರಾಜಸ್ಥಾನ್ ರಾಯಲ್ಸ್(ಆರ್‌ಆರ್) ಇತ್ತೀಚಿಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು ಬಗ್ಗುಬಡಿದು 2ನೇ ಕ್ವಾಲಿಫೈಯರ್‌ಗೆ ಎಂಟ್ರಿ ಕೊಟ್ಟಿದೆ.
ಇಂದು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಫೈನಲ್ ಪ್ರವೇಶಿಸಲು ಪೈಪೋಟಿ ನಡೆಸಲಿವೆ.
ಹೈದರಾಬಾದ್- ಶಕ್ತಿ, ದೌರ್ಬಲ್ಯ ಹೈದರಾಬಾದ್ ತಂಡಕ್ಕೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ನಿತೀಶ್ ರೆಡ್ಡಿ, ಮಾರ್ಕ್ರಾಮ್, ಅಬ್ದುಲ್ ಸಮದ್ ಮತ್ತು ಶಹಬಾಜ್ ಅಹ್ಮದ್ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇನ್ನು, ಭುವನೇಶ್ವರ್ ಕುಮಾರ್, ನಟರಾಜನ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರಂಥ ಪ್ರಮುಖ ವೇಗಿಗಳನ್ನು ತಂಡ ಹೊಂದಿದೆ. ಆದರೆ, ಚೆನ್ನೈ ಪಿಚ್ ಸ್ಪಿನ್ ಪರವಾಗಿದ್ದು, ಹೈದರಾಬಾದ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಬಲ್ಲ ಸ್ಪಿನ್ನರ್ ಇಲ್ಲ. ಇದು ತಂಡದ ತಲೆನೋವು ಹೆಚ್ಚಿಸಬಹುದು. ಇನ್ನು ವಾಷಿಂಗ್ಟನ್ ಸುಂದರ್/ಮಯಾಂಕ್ ಮಾರ್ಕಾಂಡೆಗೆ ಇಂದು ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು.
ರಾಜಸ್ಥಾನ-ಶಕ್ತಿ, ದೌರ್ಬಲ್ಯ: ಈ ಋತುವಿನ ಆರಂಭದಲ್ಲಿ ರಾಜಸ್ಥಾನ ಸತತ ಗೆಲುವುಗಳನ್ನು ಕಂಡಿತ್ತು. ಮೊದಲಾರ್ಧದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿತ್ತು. ಆದರೆ, ಅಚ್ಚರಿ ಎಂಬಂತೆ ದ್ವಿತೀಯಾರ್ಧದಲ್ಲಿ ಕೊಂಚ ಎಡವಿದೆ. ಎಲಿಮಿನೇಟರ್ ಹೊರತುಪಡಿಸಿ ರಾಜಸ್ಥಾನ ಆಡಿದ ಕೊನೆಯ 6 ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಐದರಲ್ಲಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇತ್ತೀಚೆಗೆ ಆರ್‌ಸಿಬಿ ವಿರುದ್ಧ ಎಲಿಮಿನೇಟರ್‌ನಲ್ಲಿ ಪುನರಾಗಮನ ಮಾಡಿತ್ತು.
ಯಶಸ್ವಿ ಜೈಸ್ವಾಲ್, ನಾಯಕ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್ ಮತ್ತು ಹೆಟ್ಮೆಯರ್ ತಂಡದ ಬ್ಯಾಟಿಂಗ್ ಬಲ. ಬೋಲ್ಟ್, ಅಶ್ವಿನ್, ಚಾಹಲ್, ಸಂದೀಪ್ ಶರ್ಮಾ ಮತ್ತು ಅವೇಶ್ ಖಾನ್ ಅವರೊಂದಿಗೆ ಬೌಲಿಂಗ್‌ನಲ್ಲಿ ತಂಡ ಬಲಿಷ್ಠವಾಗಿದೆ. ಇನ್ನು, ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಹೊಂದಿಕೆಯಾಗುವುದರಿಂದ ರಾಜಸ್ಥಾನ ತಂಡಕ್ಕೆ ಪ್ಲಸ್ ಆಗಬಹುದು. ಸ್ಪಿನ್ನರ್‌ಗಳಾದ ಅಶ್ವಿನ್ ಮತ್ತು ಚಹಾಲ್ ಈ ಪಂದ್ಯದಲ್ಲಿ ಕಮಾಲ್ ಮಾಡುವ ಸಾಧ್ಯತೆ ಇದೆ. ಆದರೆ ಸ್ಫೋಟಕ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಗೈರು ತಂಡಕ್ಕೆ ಅನುಭವದ ಕೊರತೆಯಾಗಬಹುದು. ಇನ್ನುಳಿದಂತೆ, ಮ್ಯಾಚ್ ಫಿನಿಶ್ ಮಾಡಬಲ್ಲ ಆಟಗಾರರು ತಂಡದಲ್ಲಿಲ್ಲ ಎನ್ನುವುದು ಮತ್ತೊಂದು ಗಮನಾರ್ಹ ಕೊರತೆ.
ಇತ್ತಂಡಗಳ ಮುಖಾಮುಖಿ: ಹಿಂದಿನ ದಾಖಲೆಗಳನ್ನು ನೋಡಿದರೆ, ಎರಡೂ ತಂಡಗಳು ಸಮಾನ ಸಾಮರ್ಥ್ಯ ಹೊಂದಿವೆ. ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಸನ್‌ರೈಸರ್ಸ್ 10 ಮತ್ತು ರಾಜಸ್ಥಾನ 9 ಪಂದ್ಯಗಳನ್ನು ಗೆದ್ದಿವೆ. ಈ ಋತುವಿನಲ್ಲಿ ಆಡಿದ ಒಂದು ಪಂದ್ಯದಲ್ಲಿ ಸನ್‌ರೈಸರ್ಸ್ ರಾಜಸ್ಥಾನ ವಿರುದ್ಧ ಒಂದು ರನ್‌ನಿಂದ ಗೆದ್ದಿತ್ತು.
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ
ಇದನ್ನೂ ಓದಿ: "ನೀವು ಈ ರೀತಿ ಮಾಡಿದ್ರೆ ಟ್ರೋಫಿ ಗೆಲ್ಲಲ್ಲ": ಆರ್‌ಸಿಬಿ ವಿರುದ್ಧ ಮತ್ತೆ ಉರಿದುಬಿದ್ದ ಅಂಬಟಿ ರಾಯುಡು - Ambati Rayudu