ಹೈದರಾಬಾದ್: ಐಪಿಎಲ್ನ 58ನೇ ಪಂದ್ಯದಲ್ಲಿಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯ ಎರಡೂ ತಂಡಗಳ ಪಾಲಿಗೆ ಮಹತ್ವದಾಗಿದ್ದು ಗೆದ್ದ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಸೋತ ತಂಡಕ್ಕೆ ಪ್ಲೇ ಆಫ್ ಬಾಗಿಲು ಮುಚ್ಚಿಕೊಳ್ಳಲಿದೆ. ಹಾಗಾಗಿ ಇದು ಮಾಡು ಇಲ್ಲ ಮಡಿ ಪಂದ್ಯ.
ಉಭಯ ತಂಡಗಳು ತಲಾ 11 ಪಂದ್ಯಗಳನ್ನು ಆಡಿ 4ರಲ್ಲಿ ಗೆದ್ದು 7ರಲ್ಲಿ ಸೋಲನುಭವಿಸಿವೆ. ಅಂಕ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ.
ಹಿಂದಿನ ಪಂದ್ಯಗಳು: ಆರ್‌ಸಿಬಿ ತನ್ನ ಹಿಂದಿನ ಮೂರು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸುವ ಮೂಲಕ ಲಯಕ್ಕೆ ಮರಳಿದೆ. ಸನ್ರೈಸರ್ಸ್ ಮತ್ತು ಗುಜರಾತ್ ವಿರುದ್ದದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನೆಟ್ ರನ್ ರೇಟ್ನಲ್ಲೂ ಕೊಂಚ ಸುಧಾರಣೆಯಾಗಿದೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ದ ಹೀನಾಯ ಸೋಲನುಭವಿಸಿತ್ತು.
ಹೆಡ್ ಟು ಹೆಡ್: ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಒಟ್ಟು 32 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಪಂಜಾಬ್ ಕಿಂಗ್ಸ್ 17 ಪಂದ್ಯಗಳನ್ನು ಗೆದ್ದರೆ, ಬೆಂಗಳೂರು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಗರಿಷ್ಠ ಸ್ಕೋರ್ 232 ರನ್ ಆಗಿದ್ದರೆ, ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗರಿಷ್ಠ ಸ್ಕೋರ್ 226 ರನ್ ಆಗಿದೆ.
ಇತ್ತಂಡಗಳ ನಡುವೆ ನಡೆದ ಕೊನೆಯ 5 ಪಂದ್ಯಗಳ ಪೈಕಿ 3ರಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇದೇ ಋತುವಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ವಿರುದ್ದ 4 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಇದರಲ್ಲಿ ವಿರಾಟ್ ಕೊಹ್ಲಿ 77 ರನ್ಗಳ ಇನಿಂಗ್ಸ್ ಆಡಿ ಮಿಂಚಿದ್ದರು.
ಪಿಚ್ ರಿಪೋರ್ಟ್: ಧರ್ಮಶಾಲಾ ಬ್ಯಾಟಿಂಗ್ ಪಿಚ್ ಆಗಿದ್ದರೂ ಬೌಲರ್ಗಳು ಪ್ರಾಬಲ್ಯ ಮೆರೆದಿರುವ ಸಾಕಷ್ಟು ಉದಾಹರಣೆಗಳಿವೆ. ಈ ಪಿಚ್ನಲ್ಲಿ ಹೆಚ್ಚಿನ ಬೌನ್ಸ್ ಕಾಣಬಹುದಾಗಿದ್ದು, ಮೊದಲು ಬ್ಯಾಟ್ ಮಾಡಿದ ತಂಡ ಹೆಚ್ಚಾಗಿ ಗೆಲುವು ಸಾಧಿಸಿದೆ. ಹಾಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಮೈದಾನದಲ್ಲಿ ನಡೆದ ಹಿಂದಿನ ಐಪಿಎಲ್ ಪಂದ್ಯದಲ್ಲಿ ಕಡಿಮೆ ಸ್ಕೋರ್ ದಾಖಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 167/9 ಸ್ಕೋರ್ ಕಲೆಹಾಕಿತ್ತು. ಎರಡನೇ ಇನಿಂಗ್ಸ್ ಸ್ಕೋರ್ 139/9 ಆಗಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಸಂಭಾವ್ಯ ತಂಡಗಳು-ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ರಿಲೀ ರೊಸೊವ್, ಶಶಾಂಕ್ ಸಿಂಗ್, ಸ್ಯಾಮ್ ಕರ್ರಾನ್ (ಕ್ಯಾ), ಜಿತೇಶ್ ಶರ್ಮಾ (ವಿ.ಕೀ), ಆಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್. (ಇಂಪ್ಯಾಕ್ಟ್ ಪ್ಲೇಯರ್ಸ್: ಪ್ರಭಾಸಿಮ್ರಾನ್ ಸಿಂಗ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಕ್ಯಾ), ಗ್ಲೆನ್ ಮ್ಯಾಕ್ಸ್‌ವೆಲ್, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಯಶ್ ದಯಾಳ್, ವಿಜಯ್ ಕುಮಾರ್ ವೈಶಾಖ್, ಮೊಹಮ್ಮದ್ ಸಿರಾಜ್. (ಇಂಪ್ಯಾಕ್ಟ್ ಪ್ಲೇಯರ್ಸ್: ರಜತ್ ಪಾಟಿದಾರ್)
ಇದನ್ನೂ ಓದಿ: ಫ್ರಾನ್ಸ್ನ ಮಾರ್ಸೆಲ್ಲೆ ತಲುಪಿದ ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ: ಲಕ್ಷಾಂತರ ಜನರ ಸಂಭ್ರಮ - Olympic Torch