ದೆಹಲಿ: ಟ್ರಿಸ್ಟನ್ ಸ್ಟಬ್ಸ್ (57) ಮತ್ತು ಅಭಿಷೇಕ್ ಪೊರೆಲ್ (58) ಅದ್ಭುತ ಅರ್ಧಶತಕ ಮತ್ತು ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 64ನೇ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ 19 ರನ್‌ಗಳಿಂದ ಗೆಲುವು ಸಾಧಿಸಿತು.
ಮಂಗಳವಾರ ಸಂಜೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂತ್ ನೇತೃತ್ವದ ಡೆಲ್ಲಿ ನೀಡಿದ 209 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ, ಅತ್ಯಂತ ಕಳಪೆ ಆರಂಭ ಪಡೆಯಿತು. 44 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ (12), ನಾಯಕ ಕೆ.ಎಲ್.ರಾಹುಲ್ (5), ಮಾರ್ಕಸ್ ಸ್ಟೊಯಿನಿಸ್ (5), ದೀಪಕ್ ಹೂಡಾ (0) ಡೆಲ್ಲಿ ಬೌಲರ್‌ಗಳ ಬಲೆಗೆ ಬಿದ್ದು ಪೆವಿಲಿಯನ್ ಹಾದಿ ಹಿಡಿದರು.
ಬಳಿಕ ಕ್ರೀಸಿಗೆ ಬಂದ ಆಯುಷ್ ಬಡೋನಿ (6) ಕೂಡ ಬಹುಬೇಗ ನಿರ್ಗಮಿಸಿದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತಲು ನಿಕೋಲಸ್ ಪೂರನ್ ಮತ್ತು ಕೃನಾಲ್ ಪಾಂಡ್ಯ ಪ್ರಯತ್ನಿಸಿದರು. ಬಿರುಸಾಗಿ ಬ್ಯಾಟ್ ಬೀಸಿದ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 61 ರನ್ ಕೊಡುಗೆ ನೀಡಿ ನಿರ್ಗಮಿಸಿದರು. ಮತ್ತೊಂದೆಡೆ, 18 ರನ್‌ಗಳಿಸಿದ್ದ ಕೃನಾಲ್ ಕೂಡ ಕುಲದೀಪ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ಬಂದ ಅರ್ಷದ್ ಖಾನ್ (58*), ಯುದ್ಧವೀರ್ ಸಿಂಗ್ ಚರಕ್ (14) ಮತ್ತು ರವಿ ಬಿಷ್ಣೋಯ್ (2) ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಲಕ್ನೋ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿ ಇನ್ನಿಂಗ್ಸ್ ಮುಗಿಸಿತು. ದೆಹಲಿ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಅಕ್ಷರ್ ಪಟೇಲ್ ಮತ್ತು ಟ್ರಿಸ್ಟನ್ ಸ್ಟ್ರಬ್ಸ್ ತಲಾ 1 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ, ಅಭಿಷೇಕ್ ಪೊರೆಲ್ (58), ಹೋಪ್ (38), ಪಂತ್ (33), ಸ್ಟಬ್ಸ್ (57), ಅಕ್ಷರ್ (14) ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಲಕ್ನೋ ಪರ ನವಿನ್ ಉಲ್ಹಕ್ 2, ಅರ್ಷದ್ ಖಾನ್ ಮತ್ತು ಬಿಷ್ಣೋಯಿ ತಲಾ ಒಂದು ವಿಕೆಟ್ ಕಬಳಿಸಿದರು.
ಆರ್ಸಿಬಿ ಪ್ಲೇ ಆಫ್ಗೆ ಮತ್ತಷ್ಟು ಸನಿಹ: ಲಕ್ನೋ ಸೋಲನುಭವಿಸುವ ಮೂಲಕ ಆರ್ಸಿಬಿ ಪ್ಲೇ ಆಫ್ಗೆ ಮತ್ತಷ್ಟು ಸನಿಹವಾಗಿದೆ. ಕೆಕೆಆರ್ ಮತ್ತು ರಾಜಸ್ಥಾನ ತಂಡಗಳು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದು, ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹೈದರಾಬಾದ್, ಚೆನ್ನೈ, ಆರ್ಸಿಬಿ ನಡುವೆ ಪೈಪೋಟಿ ಏರ್ಪಟ್ಟಿದೆ.
ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಗೆದ್ದು 14 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದರೂ ನೆಟ್ ರನ್ರೇಟ್ ಆರ್‌ಸಿಬಿಗಿಂತಲೂ ಕಡಿಮೆ ಇದ್ದ ಪ್ಲೇ ಆಫ್‌ಗೇರುವುದು ಕಷ್ಟವಾಗಿದೆ. ಲಕ್ನೋ 7ನೇ ಸ್ಥಾನದಲ್ಲಿದ್ದು ತನ್ನ ಮುಂದಿನ ಮುಂಬೈ ವಿರುದ್ದದ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆದ್ದರೂ ಪ್ಲೇ ಆಫ್ ಕನಸಿನ ಮಾತೇ. ಉಳಿದಂತೆ, ಸನ್ರೈಸರ್ಸ್ ತನ್ನ ಕೊನೆಯ ಎರಡೂ ಪಂದ್ಯಗಳನ್ನು ಗೆದ್ದರೂ ಆರ್ಸಿಬಿಗೆ ಯಾವುದೇ ನಷ್ಟವಿಲ್ಲ. ಆದರೆ ಆರ್ಸಿಬಿ ತಂಡ ಚೆನ್ನೈ ವಿರುದ್ದದ ಪಂದ್ಯದಲ್ಲಿ 18 ರನ್ ಅಥವಾ 18.1 ಓವರ್ನಲ್ಲಿ ಗೆಲುವು ಸಾಧಿಸಿದರೆ ಮಾತ್ರ 4ನೇ ಸ್ಥಾನಕ್ಕೆ ಏರಿಕೆ ಕಂಡು ಪ್ಲೇ ಆಫ್ಗೇರುತ್ತದೆ.