ಪರ್ತ್ (ಆಸ್ಟ್ರೇಲಿಯಾ): ಇಂದಿನಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಪುರುಷರ ಹಾಕಿ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಈ ಸರಣಿ ಆಸ್ಟ್ರೇಲಿಯಾದ ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಾಗಲೇ ಭಾರತದ ತಂಡ ಅಲ್ಲಿಗೆ ತೆರಳಿ ಅಭ್ಯಾಸವನ್ನೂ ನಡೆಸಿದೆ. ಒಲಿಂಪಿಕ್ಸ್‌ನಲ್ಲಿ ಎರಡೂ ತಂಡಗಳು ಒಂದೇ ಗುಂಪಿನಲ್ಲಿರುವ ಕಾರಣ ಉಭಯ ತಂಡಗಳಿಗೆ ಈ ಟೆಸ್ಟ್ ಸರಣಿ ಮಹತ್ವದಾಗಿದೆ. ಮತ್ತು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ತಮ್ಮ ಸಿದ್ಧತೆ ಮತ್ತು ಸಾಮರ್ಥ್ಯವನ್ನು ಅವಲೋಕಿಸಲು ಸಹಾಯಕವಾಗಲಿದೆ. ಮತ್ತೊಂದೆಡೆ ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಆದ್ದರಿಂದ ಎರಡೂ ತಂಡಗಳು ಟೆಸ್ಟ್ ಸರಣಿಯ ಮೂಲಕ ಪರಸ್ಪರ ತಮ್ಮ ಸಾಮರ್ಥ್ಯದ ಮೌಲ್ಯಮಾಪನ ಮಾಡುವ ಅವಕಾಶ ಪಡೆಯಲಿವೆ.
ಈ ಕುರಿತು ಮಾತನಾಡಿರುವ ಭಾರತ ಹಾಕಿ ತಂಡದ ನಾಯಕ ನಾಯಕ ಹರ್ಮನ್‌ಪ್ರೀತ್ ಸಿಂಗ್, ಈ ಸವಾಲಿಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಕಠಿಣ ಎದುರಾಳಿ ಎಂದು ನಮಗೆ ತಿಳಿದಿದೆ. ಆದರೆ, ನಮ್ಮ ಸಾಮರ್ಥ್ಯ ಮತ್ತು ಸಿದ್ಧತೆಗಳಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ಮಾತ್ರವಲ್ಲದೇ ಒಂದು ನಮ್ಮನ್ನು ಸುಧಾರಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಮಾತನಾಡಿ, "ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಕಾರ್ಯತಂತ್ರದ ಜತೆಗೆ ಸುಧಾರಣೆಯ ಅಗತ್ಯವಿರುವ ಅಂಶಗಳನ್ನು ಕಂಡುಕೊಳ್ಳಬಹುದಾಗಿದೆ. ನಮ್ಮ ಕಾರ್ಯತಂತ್ರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಆಸ್ಟ್ರೇಲಿಯಾದ ಸವಾಲಿಗೆ ಸೂಕ್ತ ಪ್ರತಿಕ್ರಿಯೆ ನೀಡುವತ್ತ ಗಮನ ಹರಿಸಲಾಗುವುದು" ಎಂದು ಹೇಳಿದ್ದಾರೆ.
ಭಾರತ ಕೊನೆಯ ಬಾರಿಗೆ 2014ರಲ್ಲಿ ವಿದೇಶದಲ್ಲಿ ಹಾಕಿ ಟೆಸ್ಟ್ ಸರಣಿ ಗೆದ್ದಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಭಾರತ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿತ್ತು. ಆಸ್ಟ್ರೇಲಿಯಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಸೋತಿತ್ತು.
ತಂಡಗಳ ಸೋಲು-ಗೆಲುವಿನ ಅಂಕಿ - ಅಂಶ: 2013 ರಿಂದ ಭಾರತ ಮತ್ತು ಆಸ್ಟ್ರೇಲಿಯ ನಡುವೆ ಒಟ್ಟು 43 ಪಂದ್ಯಗಳು ನಡೆದಿವೆ. ಅದರಲ್ಲಿ ಆಸ್ಟ್ರೇಲಿಯಾ 28ರಲ್ಲಿ ಗೆಲುವು ಸಾಧಿಸಿದರೆ ಭಾರತ 8 ಜಯಗಳಿಸಿದೆ. ಏಳು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಭಾರತ ತಂಡ, ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರಾ, ಪಿಆರ್ ಶ್ರೀಜೇಶ್,
ಡಿಫೆಂಡರ್‌ಗಳು: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜರ್ಮನ್‌ಪ್ರೀತ್ ಸಿಂಗ್, ಸಂಜಯ್, ಸುಮಿತ್, ಜುಗ್ರಾಜ್ ಸಿಂಗ್, ಅಮೀರ್ ಅಲಿ.
ಮಿಡ್‌ಫೀಲ್ಡರ್‌ಗಳು: ಹಾರ್ದಿಕ್ ಸಿಂಗ್ (ಉಪನಾಯಕ), ಮನ್‌ಪ್ರೀತ್ ಸಿಂಗ್, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ರಾಜ್‌ಕುಮಾರ್ ಪಾಲ್, ನೀಲಕಂಠ ಶರ್ಮಾ, ವಿಷ್ಣುಕಾಂತ್ ಸಿಂಗ್.
ಫಾರ್ವರ್ಡ್: ಮನ್‌ದೀಪ್ ಸಿಂಗ್, ಆಕಾಶದೀಪ್ ಸಿಂಗ್, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್, ಮೊಹಮ್ಮದ್ ರಹೀಲ್ ಮೌಸಿನ್, ಸುಖಜಿತ್ ಸಿಂಗ್, ಅರಿಜಿತ್ ಸಿಂಗ್ ಹುಂಡಾಲ್, ಬಾಬಿ ಸಿಂಗ್ ಧಾಮಿ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆಗೆ
ಮುಂದಿನ ಪಂದ್ಯ: ಏಪ್ರಿಲ್ 13, ಪರ್ತ್ ಹಾಕಿ ಕ್ರೀಡಾಂಗಣ, ಪರ್ತ್, ಆಸ್ಟ್ರೇಲಿಯಾ
ಇದನ್ನೂ ಓದಿ: ತವರಿನಲ್ಲಿ ಹೈದರಾಬಾದ್ಗೆ ಗೆಲುವಿನ ನಗೆ: ಅರ್ಧಶತಕ ಸಿಡಿಸಿ ಸಂಭ್ರಮಿಸಿದ ಮಾರ್ಕ್ರಾಮ್ - IPL 2024