ಹೈದರಾಬಾದ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಂದು ಭಾರತ ಹಾಕಿ ತಂಡವು ಅರ್ಜೆಂಟೀನಾವನ್ನು ಎದುರಿಸಲಿದೆ. ಈಗಾಗಲೇ ತಾನಾಡಿದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿದ ಭಾರತ, ಬಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಇದೇ ಗುಂಪಿನಲ್ಲಿ ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಬಿ ಗುಂಪಿನ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಇಂದು ಭಾರತೀಯ ಹಾಕಿಗೆ ಅತ್ಯಂತ ಐತಿಹಾಸಿಕ ಮತ್ತು ಸ್ಮರಣೀಯ ದಿನ. ಏಕೆಂದರೆ 44 ವರ್ಷಗಳ ಹಿಂದೆ ಇದೇ ದಿನ ಭಾರತ ಒಲಿಂಪಿಕ್ಸ್‌ನಲ್ಲಿ ತನ್ನ ಕೊನೆಯ ಚಿನ್ನದ ಪದಕ ಗೆದ್ದಿತ್ತು. ಅಂದಿನಿಂದ ತಂಡ ಚಿನ್ನ ಗೆಲ್ಲುವಲ್ಲಿ ಸತತವಾಗಿ ಎಡವುತ್ತಿದೆ.
ಮಾಸ್ಕೋದಲ್ಲಿ ಕೊನೆಯ ಪದಕ: 1980ರ ಜುಲೈ 29 ರಂದು ಮಾಸ್ಕೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಕೊನೆಯ ಬಾರಿಗೆ ಚಿನ್ನ ಗೆದ್ದುಕೊಂಡಿತ್ತು. ಅಂದು ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 4-3 ಗೋಲುಗಳಿಂದ ಸೋಲಿಸಿತ್ತು. ಭಾರತದ ಪರ ಸುರಿಂದರ್ ಸಿಂಗ್ ಸೋಧಿ ಗರಿಷ್ಠ 2 ಗೋಲು ಹಾಗೂ ಮಹಾರಾಜ್ ಕೃಷ್ಣ ಕೌಶಿಕ್ ಹಾಗೂ ಮೊಹಮ್ಮದ್ ಶಾಹಿದ್ ತಲಾ 1 ಗೋಲು ಗಳಿಸಿದ್ದರು.
ಆದರೆ, 1980ರಿಂದ 2020ರವರೆಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಯಾವುದೇ ಪದಕ ಗೆಲ್ಲಲು ಸಾಧ್ಯವಾಗಿಲ್ಲ. 2020ರಲ್ಲಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದು 41 ವರ್ಷಗಳ ಬರ ನೀಗಿಸಿತ್ತು.
ಜರ್ಮನಿಯನ್ನು ಸೋಲಿಸಿದ್ದ ಭಾರತ: ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು 5-4 ಅಂತರದಿಂದ ಸೋಲಿಸಿತ್ತು. 1980ರ ನಂತರ ಹಾಕಿಯಲ್ಲಿ ಗೆದ್ದ ಮೊದಲ ಮತ್ತು ಕೊನೆಯ ಪದಕ ಇದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿಯ ತಂಡದ ಪ್ರದರ್ಶನ ನೋಡಿದರೆ ಭಾರತ ಮತ್ತೊಮ್ಮೆ ಪದಕ ಗೆದ್ದು ದಶಕಗಳ ಚಿನ್ನದ ಪದಕದ ಬರ ನೀಗಿಸುವಲ್ಲಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಇದೆ. ಇಲ್ಲಿಯವರೆಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕ ಸೇರಿದಂತೆ ಒಟ್ಟು 12 ಪದಕಗಳನ್ನು ಜಯಿಸಿದೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ 2024: ಮೂರನೇ ದಿನದಾಟದಲ್ಲಿ ಭಾರತ ಪಂದ್ಯಗಳು ಹೀಗಿವೆ - INDIAN ATHLETES TODAY SCHEDULE