ವಿಶಾಖಪಟ್ಟಣಂ(ಆಂಧ್ರಪ್ರದೇಶ): ಭಾರತ 399 ರನ್ಗಳ ಸವಾಲು ನೀಡಿದಾಗಲೇ ಅರ್ಧ ಸೋತಿದ್ದ ಇಂಗ್ಲೆಂಡ್, ನಿರೀಕ್ಷೆಯಂತೆ 292 ರನ್ಗಳಿಗೆ ಗಂಟುಮೂಟೆ ಕಟ್ಟುವ ಮೂಲಕ 2ನೇ ಟೆಸ್ಟ್ ಪಂದ್ಯದಲ್ಲಿ 106 ರನ್ಗಳ ಸೋಲು ಕಂಡಿತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-1ರಲ್ಲಿ ಸಮಬಲ ಸಾಧಿಸಿತು.
-
A terrific Test match comes to an end in Vizag with #TeamIndia completing a 106-run win 👏👏
— BCCI (@BCCI) February 5, 2024
Scorecard ▶️ https://t.co/X85JZGt0EV#INDvENG | @IDFCFIRSTBank pic.twitter.com/GSQJFN6n3A
'ಬಾಜ್‌ಬಾಲ್'ಗೆ ಅಶ್ವಿನ್, ಬುಮ್ರಾ ಬಾಲ್ ಪ್ರತ್ಯಸ್ತ್ರ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಕಿ ಎರಡು ದಿನದಲ್ಲಿ ಗೆಲ್ಲಲು ಇಂಗ್ಲೆಂಡ್ಗೆ 332 ರನ್ ಬೇಕಾಗಿತ್ತು. ಕೈಯಲ್ಲಿ 9 ವಿಕೆಟ್ಗಳು ಇದ್ದವು. ತಾಳ್ಮೆಯ ಕ್ರಿಕೆಟ್ ಮಾದರಿಯಾದ ಟೆಸ್ಟ್ನಲ್ಲಿ ತಾನೇ ಪರಿಚಯಿಸಿರುವ 'ಬಾಜ್‌ಬಾಲ್' ತಂತ್ರದಿಂದ ಆಂಗ್ಲರು ಗೆಲುವಿನ ಆಸೆ ಹೊಂದಿದ್ದರು. ಆದರೆ, 1 ವಿಕೆಟ್ಗೆ 67 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ಗೆ ಹಿರಿಯ ಸ್ಪಿನ್ ತಜ್ಞ ಆರ್.ಅಶ್ವಿನ್ ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಮತ್ತೆ ಮಾರಕವಾದರು.
'ನೈಟ್ ವಾಚ್ಮನ್' ಆಗಿ ಬಂದಿದ್ದ ರೆಹಾನ್ ಅಹ್ಮದ್ಗೆ (23) ಅಕ್ಷರ್ ಪಟೇಲ್ ಪೆವಿಲಿಯನ್ಗೆ ಅಟ್ಟಿದರು. ಬಳಿಕ ಬಂದ ಓಲಿ ಪೋಪ್ (23), ಜೋ ರೂಟ್‌ರನ್ನು (16) ಅಶ್ವಿನ್ ತಮ್ಮ ಸ್ಪಿನ್ ಅಸ್ತ್ರದಿಂದ ಕೆಡವಿದರು. ಇದರ ಬೆನ್ನಲ್ಲೇ, ತಂಡವನ್ನು ಆಧರಿಸಿಬೇಕಿದ್ದ ಹಿರಿಯ ಬ್ಯಾಟರ್ ಜಾನಿ ಬೈರ್ಸ್ಟೋವ್ (26), ನಾಯಕ ಬೆನ್ ಸ್ಟೋಕ್ಸ್ (11) ರನ್ಗೆ ವಿಕೆಟ್ ನೀಡಿದರು. ಇದರಿಂದ ತಂಡ 220ಕ್ಕೆ 7 ವಿಕೆಟ್ ಕಳೆದುಕೊಂಡು ಗೆಲುವಿನ ಆಸೆಯನ್ನೇ ಕೈಬಿಟ್ಟಿತು.
ಸಮಯ ಕಳೆದ ಫೋಕ್ಸ್, ಟಾಮ್: ತಂಡ ಸೋಲುತ್ತದೆ ಎಂದು ತಿಳಿದಿದ್ದರೂ, ವಿಕೆಟ್ ಕೀಪರ್ ಬೆನ್ ಫೋಕ್ಸ್ ಮತ್ತು ಸ್ಪಿನ್ ಆಲ್ರೌಂಡರ್ ಟಾಮ್ ಹಾರ್ಟ್ಲಿ ಕೆಲ ಹೊತ್ತು ಪ್ರತಿರೋಧ ತೋರುವ ಮೂಲಕ ಕ್ರೀಡಾಂಗಣದಲ್ಲಿ ನೆರೆದಿದ್ದ ಇಂಗ್ಲೆಂಡ್ನ ಅಭಿಮಾನಿಗಳನ್ನು ರಂಜಿಸಿದರು. ಫೋಕ್ಸ್, ಟಾಮ್ ತಲಾ 36 ರನ್ ಗಳಿಸಿದರು. ಇಬ್ಬರನ್ನೂ ಜಸ್ಪ್ರೀತ್ ಬೂಮ್ರಾ ಪೆವಿಲಿಯನ್ಗೆ ಕಳುಹಿಸುವ ಮೂಲಕ ಇಂಗ್ಲೆಂಡ್ಗೆ ಸೋಲಿನ ರುಚಿ ತೋರಿಸಿದರು.
ಸರಣಿ ಸಮ: ಹೈದರಾಬಾದ್ನ ಉಪ್ಪಳದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಸರಣಿಯಲ್ಲಿ ಶುಭಾರಂಭ ಕಂಡಿದ್ದ ಪ್ರವಾಸಿ ಆಂಗ್ಲರು, 2 ನೇ ಟೆಸ್ಟ್ನಲ್ಲಿ ಭಾರತದೆದುರು ಮಂಡಿಯೂರಿದರು. ಇದರಿಂದ ಐದು ಪಂದ್ಯಗಳ ಸರಣಿ 1-1 ರಲ್ಲಿ ಸಮವಾಯಿತು. ಎರಡೂ ಇನಿಂಗ್ಸ್ಗಳಿಂದ 9 ವಿಕೆಟ್ ಕಿತ್ತ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 396, ಎರಡನೇ ಇನಿಂಗ್ಸ್ 255, ಇಂಗ್ಲೆಂಡ್ ಮೊದಲ ಇನಿಂಗ್ಸ್ 253, 2ನೇ ಇನಿಂಗ್ಸ್ 292
ಮುಂದಿನ ಪಂದ್ಯ: ಸರಣಿಯ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15ರಿಂದ 19ರವರೆಗೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ವಿನೇಶ್ ಫೋಗಟ್ಗೆ ಚಿನ್ನ