IND vs NZ 2nd Test: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪುಣೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನ ಇಂದಿನ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ದಿನದಾಟದ ಅಂತ್ಯಕ್ಕೆ ಕಿವೀಸ್ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಇದರೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ 301 ರನ್‌ಗಳ ಮುನ್ನಡೆ ಸಾಧಿಸಿ, ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಪರ ಆರಂಭಿಕ ಬ್ಯಾಟರ್ ಟಾಮ್ ಲ್ಯಾಥಮ್ (86 ರನ್; 133 ಎಸೆತಗಳಲ್ಲಿ 10x4) ಅರ್ಧಶತಕ ಸಿಡಿಸಿದರು. ಸದ್ಯ ಗ್ಲೆನ್ ಫಿಲಿಪ್ (9*) ಮತ್ತು ಟಾಮ್ ಬ್ಲಂಡೆಲ್ (30*) ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನೊಂದೆಡೆ, ಎರಡನೇ ಇನ್ನಿಂಗ್ಸ್ನಲ್ಲೂ ಭರ್ಜರಿ ಬೌಲಿಂಗ್ ಪ್ರದರ್ಶನ ತೋರಿರುವ ಭಾರತದ ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ವಿಂಚಿದರು. ಉಳಿದಂತೆ, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ: ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 156 ರನ್‌ಗಳಿಗೆ ಆಲೌಟ್ ಆಗಿತ್ತು. ಬೌಲಿಂಗ್ನಲ್ಲಿ ಯಶಸ್ವಿಯಾದ ಭಾರತ, ಬ್ಯಾಟಿಂಗ್ನಲ್ಲಿ ಸಂಕಷ್ಟಕ್ಕೆ ಸಿಲುಕಿತು. 16-1 ಓವರ್‌ನೈಟ್ ಸ್ಕೋರ್‌ನೊಂದಿಗೆ ಮೊದಲ ಇನಿಂಗ್ಸ್ ಮುಂದುವರಿಸಿದ ಟೀಂ ಇಂಡಿಯಾ ಎರಡನೇ ದಿನದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು. ಸತತವಾಗಿ ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (30), ಶುಭಮನ್ ಗಿಲ್ (30) ಮತ್ತು ರವೀಂದ್ರ ಜಡೇಜಾ (38) ಅಲ್ಪ ಮೊತ್ತದ ರನ್ ಕಲೆಹಾಕಿದರು.
Stumps on Day 2
— BCCI (@BCCI) October 25, 2024
New Zealand extend their lead to 301 runs
Scorecard ▶️ https://t.co/3vf9Bwzgcd#TeamIndia | #INDvNZ | @IDFCFIRSTBank pic.twitter.com/uFXuaDb11y
ಸ್ಯಾಂಟ್ನರ್ 7 ವಿಕೆಟ್ ಸಾಧನೆ: ಆದರೆ ಭಾರಿ ನಿರೀಕ್ಷೆಯೊಂದಿಗೆ ಕ್ರೀಸ್ ಪ್ರವೇಶಿಸಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (1) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಉಳಿದಂತೆ ಪಂತ್ (18), ಸರ್ಫರಾಜ್ ಖಾನ್ (11), ಅಶ್ವಿನ್ (4), ಸುಂದರ್ (18*), ಆಕಾಶ್ದೀಪ್ (6) ರನ್ ಗಳಿಸಲಷ್ಟೇ ಶಕ್ತರಾದರು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ 7 ವಿಕೆಟ್, ಗ್ಲೆನ್ ಫಿಲಿಪ್ 2 ಮತ್ತು ಟಿಮ್ ಸೌಥಿ 1 ವಿಕೆಟ್ ಪಡೆದರು.
ಏತನ್ಮಧ್ಯೆ, ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಮುನ್ನಡೆ ಪಡೆದಿದ್ದ ಕಿವೀಸ್, ಎರಡನೇ ಇನಿಂಗ್ಸ್‌ನಲ್ಲಿಯೂ ತನ್ನ ಹಿಡಿತ ಬಿಗಿಗೊಳಿಸುತ್ತಿದೆ. ಈಗಾಗಲೇ 5 ವಿಕೆಟ್ ಕಳೆದುಕೊಂಡಿದ್ದರೂ 301 ರನ್‌ಗಳ ಮುನ್ನಡೆಯಲ್ಲಿದೆ. ಮೂರನೇ ದಿನ ಕಿವೀಸ್ ಪಡೆ ಸುದೀರ್ಘ ಬ್ಯಾಟಿಂಗ್ ಮುಂದುವರಿಸಿದರೆ ಬೃಹತ್ ಗುರಿ ಕಲೆಹಾಕುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಆದಷ್ಟು ಬೇಗ ಕಿವೀಸ್ ಪಡೆಯನ್ನು ಆಲೌಟ್ ಮಾಡಿ ಬ್ಯಾಟಿಂಗ್ನಲ್ಲಿ ಮಿಂಚಿದರೆ ಮಾತ್ರ ಪಂದ್ಯ ಗೆಲ್ಲುವ ಅವಕಾಶವಿದೆ.
ಮಿಂಚಿದ ವಾಷಿಂಗ್ಟನ್ ಸುಂದರ್: ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದ ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅದೇ ಪ್ರದರ್ಶನ ಮುಂದುವರೆಸಿದ್ದಾರೆ. ನಾಲ್ಕು ವಿಕೆಟ್ ಪಡೆದಿರುವ ಅವರು ಎರಡನೇ ಟೆಸ್ಟ್ನಲ್ಲಿ ಒಟ್ಟು 11 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ದುಬೈ, ಲಂಡನ್ ಅಲ್ಲ, ಈ ನಗರದಲ್ಲಿ ನಡೆಯಲಿದೆಯೇ IPL ಮೆಗಾ ಹರಾಜು?