ರಾಜ್ಕೋಟ್ (ಗುಜರಾತ್) : ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಬೌಲಿಂಗ್ ಮಾಡಲಿದೆ.
ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ಹೈದರಾಬಾದ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ 28 ರನ್‌ಗಳಿಂದ ಭಾರತವನ್ನು ಸೋಲಿಸಿದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ 106 ರನ್‌ಗಳಿಂದ ಗೆಲುವು ಸಾಧಿಸಿದೆ. ಮೂರನೇ ಟೆಸ್ಟ್ ಪಂದ್ಯದ ಗೆಲುವಿಗಾಗಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಲಿವೆ. ಅಲ್ಲದೇ ಎರಡು ತಂಡಗಳಲ್ಲಿ ಕೆಲ ಆಟಗಾರರ ಬದಲಾವಣೆ ಮಾಡಲಾಗಿದೆ.
ಟೀಮ್ ಇಂಡಿಯಾ ಪರ ಯುವ ಆಟಗಾರ ಧ್ರುವ್ ಜುರಲ್ ಮತ್ತು ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಪಂದ್ಯವಾಡುತ್ತಿದ್ದು, ಜುರಲ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ. ಹೀಗಾಗಿ ಕೆ.ಎಸ್ ಭರತ್ ಅವರು ಹೊರಗುಳಿದಿದ್ದಾರೆ. ತಂಡಕ್ಕೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಗುಣಮುಖರಾಗಿ ಮರಳಿದ್ದಾರೆ. ಇಂಗ್ಲೆಂಡ್ ಪರ ವೇಗದ ಬೌಲರ್ ಮಾರ್ಕ್ ವುಡ್ ಇಂದಿನ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ ಅವರು ಇಂದು 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. 100ನೇ ಟೆಸ್ಟ್ ಆಡುತ್ತಿರುವ ಆಟಗಾರರಲ್ಲಿ ಬೆನ್ ಸ್ಟೋಕ್ 76ನೇ ಆಟಗಾರರಾಗಿದ್ದಾರೆ. ಇಂಗ್ಲೆಂಡ್ ತಂಡ ಭಾರತೀಯರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಈ ಟೆಸ್ಟ್ ಗೆದ್ದು ಮುನ್ನಡೆ ಸಾಧಿಸುವ ಹಂಬಲದಲ್ಲಿದ್ದಾರೆ. ಅತ್ತ ರೋಹಿತ್ ಪಡೆ ಕೂಡಾ ಈ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.
ತಂಡಗಳು : ಭಾರತ : ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ : ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್
ಇದನ್ನೂ ಓದಿ : 500 ವಿಕೆಟ್: ರಾಜ್ಕೋಟ್ನಲ್ಲಿ ಇತಿಹಾಸ ಬರೆಯಲಿರುವ ಸ್ಪಿನ್ ಜಾದೂಗಾರ ಅಶ್ವಿನ್