ಕೌಲಾಲಂಪುರ್ (ಸಿಂಗಾಪುರ): 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ 2025ರಲ್ಲಿ ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಆಯೋಜಿಸಲಿದೆ. ಅದೇ ರೀತಿಯಾಗಿ 2027ರಲ್ಲಿ ಏಕದಿನ ವಿಶ್ವಕಪ್ ಸಂದರ್ಭದಲ್ಲೇ ಬಾಂಗ್ಲಾದೇಶವು ಏಕದಿನ ಏಷ್ಯಾ ಕಪ್ ಟೂರ್ನಿಯ ಆತಿಥ್ಯ ವಹಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
ಏಷ್ಯಾ ಕಪ್ ಯಾವಾಗಲೂ ಜಾಗತಿಕ ಟೂರ್ನಿಗಾಗಿ ಪೂರ್ವಾಭ್ಯಾಸ ಮತ್ತು ವಿಶ್ವಕಪ್ ಸ್ವರೂಪದಲ್ಲಿ ಆಡಲಾಗುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಆಯೋಜಿಸಿದ್ದ 2023ರ ಏಷ್ಯಾ ಕಪ್ ಆವೃತ್ತಿಯನ್ನು 'ಹೈಬ್ರಿಡ್ ಮಾದರಿ'ಯಲ್ಲಿ ನಡೆಸಲಾಗಿತ್ತು. ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.
2027ರಲ್ಲಿ 50 ಓವರ್ಗಳ ವಿಶ್ವಕಪ್ಅನ್ನು ದಕ್ಷಿಣ ಆಫ್ರಿಕಾದಲ್ಲಿ ನಿಗದಿಪಡಿಸಲಾಗಿದೆ. ಇದೇ ವರ್ಷ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಟಿ-20 ಏಷ್ಯಾ ಕಪ್ ಮತ್ತು ಬಾಂಗ್ಲಾದೇಶದಲ್ಲಿ ಆಯೋಜಿಸುವ ಏಕದಿನ ಏಷ್ಯಾ ಕಪ್ ಟೂರ್ನಿಯು ತಲಾ 13 ಪಂದ್ಯಗಳನ್ನು ಒಳಗೊಂಡಿರುತ್ತದೆ.
ಏಷ್ಯಾ ಕಪ್ ಟೂರ್ನಮೆಂಟ್ನಲ್ಲಿ ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶದ ತಂಡಗಳು ಭಾಗವಹಿಸುತ್ತವೆ. ಅರ್ಹತಾ ಈವೆಂಟ್‌ಗಳ ಮೂಲಕ ಟೆಸ್ಟ್ ಆಡದ ಒಂದು ಸದಸ್ಯ ತಂಡವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯ್ಕೆ ಮಾಡುತ್ತದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಬಹುದು: ಬಿಸಿಸಿಐ ಉಪಾಧ್ಯಕ್ಷ ಶುಕ್ಲಾ