ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಆತಿಥೇಯ ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕ ಪಟ್ಟಿಯಲ್ಲಿ ಕುಸಿತ ಕಂಡಿದ್ದು, ಭಾರತ ಅಗ್ರಸ್ಥಾನಕ್ಕೇರಿದೆ. ಕಿವೀಸ್ ಎರಡನೇ ಸ್ಥಾನಕ್ಕೆ ಇಳಿದಿದೆ. ಕಳೆದೆರಡು ಬಾರಿಯ ಫೈನಲಿಸ್ಟ್ ಆಗಿರುವ ಟೀಂ ಇಂಡಿಯಾ, ಈ ಸಲವೂ ಅಂತಿಮ ಹಂತ ತಲುಪುವ ನೆಚ್ಚಿನ ತಂಡಗಳಲ್ಲೊಂದಾಗಿದೆ.
ವೆಲ್ಲಿಂಗ್ಟನ್ ಟೆಸ್ಟ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ನಾಲ್ಕು ಪಂದ್ಯಗಳಲ್ಲಿ 36 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು, ಮತ್ತು ಶೇಕಡಾ 75ರಷ್ಟು ಪಾಯಿಂಟ್ಸ್ ಗಳಿಸಿತ್ತು. ಆದರೆ, ವೆಲ್ಲಿಂಗ್ಟನ್ ಹಣಾಹಣಿಯಲ್ಲಿ 172 ರನ್‌ಗಳ ಭಾರಿ ಮುಖಭಂಗ ಅನುಭವಿಸಿ, 2021ರ WTC ಚಾಂಪಿಯನ್ ತಂಡವು ಅಗ್ರಸ್ಥಾನ ಕಳೆದುಕೊಂಡಿದೆ. ಶೇಕಡಾ 60ರ ಅಂಕಗಳೊಂದಿಗೆ ನಂ.2 ಸ್ಥಾನಕ್ಕೆ ಜಾರಿದೆ. ಈ ಹಿಂದೆ 8 ಪಂದ್ಯಗಳಲ್ಲಿ 62 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ, 64.58 ಪಾಯಿಂಟ್ ಗಳಿಸಿ ಮೊದಲ ಸ್ಥಾನಕ್ಕೇರಿದೆ.
ವೆಲ್ಲಿಂಗ್ಟನ್‌ನಲ್ಲಿನ ಗೆಲುವಿನೊಂದಿಗೆ 12 ನಿರ್ಣಾಯಕ ಅಂಕಗಳನ್ನು ಪಡೆದ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಅಂಕಗಳಲ್ಲಿ 66ರಿಂದ 78ಕ್ಕೆ ಏರಿಕೆ ಕಂಡುಬಂದಿದ್ದು, ಶೇಕಡಾವಾರು ಕೂಡ 55ರಿಂದ ಈಗ 59.09ಕ್ಕೆ ತಲುಪಿದೆ. ಕಿವೀಸ್ ವಿರುದ್ಧದ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಗೆದ್ದರೆ, ಹಾಲಿ ಚಾಂಪಿಯನ್ನರು ನ್ಯೂಜಿಲೆಂಡ್ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.
ಉಭಯ ತಂಡಗಳು ಕ್ರೈಸ್ಟ್‌ಚರ್ಚ್‌ನಲ್ಲಿ ಮಾರ್ಚ್ 8ರಂದು ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇನ್ನೊಂದೆಡೆ, ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು ಸೋಲಿಸಿದರೆ, ಆಸ್ಟ್ರೇಲಿಯಾ ಕೂಡ ಅಗ್ರಸ್ಥಾನಕ್ಕೆ ಏರಲು ಅವಕಾಶವಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ?
ಈಗಾಗಲೇ ಆಂಗ್ಲರ ವಿರುದ್ಧ ಅಂತಿಮ ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯಗೊಂಡಿರುವ ಕೆ.ಎಲ್.ರಾಹುಲ್ ಕೊನೆಯ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ರಾಂಚಿಯಲ್ಲಿ ನಡೆದ 4 ನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, 5ನೇ ಟೆಸ್ಟ್‌ಗಾಗಿ ತಂಡಕ್ಕೆ ಮರಳಿದ್ದಾರೆ.
ಜೊತೆಗೆ, ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2, 2024ರಿಂದ ಮುಂಬೈ ವಿರುದ್ಧ ಆರಂಭವಾಗಿರುವ ರಣಜಿ ಟ್ರೋಫಿ ಸೆಮಿ-ಫೈನಲ್ ಪಂದ್ಯದಲ್ಲಿ ಅವರು ತಮಿಳುನಾಡು ಪರ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪಾದಾರ್ಪಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
5ನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿ.ಕೀ), ಕೆ.ಎಸ್.ಭರತ್ (ವಿ.ಕೀ), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.