ನ್ಯೂಯಾರ್ಕ್: ಅರ್ಷದೀಪ್ ಸಿಂಗ್ ಮಿಂಚಿನ ಬೌಲಿಂಗ್ ಹಾಗೂ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಅವರ ಸಮಯೋಚಿತ ಜೊತೆಯಾಟದ (72 ರನ್) ನೆರವಿನಿಂದ ಟಿ20 ವಿಶ್ವಕಪ್‌ನಲ್ಲಿ ಯುಎಸ್ ವಿರುದ್ಧ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ. ಇಲ್ಲಿನ ಬುಧವಾರ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಅತಿಥೇಯರನ್ನು ಮಣಿಸಿದ ಟೀಂ ಇಂಡಿಯಾ ಸೂಪರ್-8ಕ್ಕೆ ಲಗ್ಗೆ ಇಟ್ಟಿದೆ.
ಅಮೆರಿಕ ನೀಡಿದ 111 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ನಾಯಕ ರೋಹಿತ್ ಶರ್ಮಾ (3) ಮತ್ತು ವಿರಾಟ್ ಕೊಹ್ಲಿ (0) ವಿಕೆಟ್ಗಳನ್ನು ಬಹುಬೇಗ ಕಳೆದುಕೊಂಡಿತು. ಕಳಪೆ ಆರಂಭದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ (18) 29 ರನ್‌ಗಳ ಜೊತೆಯಾಟ ಆಡಿದರು. ತಂಡದ ಮೊತ್ತ 39 ರನ್ ಆಗಿದ್ದಾಗ ಪಂತ್ ಬೌಲ್ಡ್ ಆದರು.
ಬಳಿಕ ಫಾರ್ಮ್‌ಗಾಗಿ ಹೆಣಗಾಡುತ್ತಿರುವ ಶಿವಂ ದುಬೆ (31*) ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ (72 ರನ್) ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ದುಬೆ ಮತ್ತು ಸೂರ್ಯಕುಮಾರ್ ಪಿಚ್ ಸ್ವರೂಪಕ್ಕೆ ತಕ್ಕಂತೆ ಬ್ಯಾಟ್ ಬೀಸಿದರು. ಸೂರ್ಯ ಅಜೇಯ ಅರ್ಧಶತಕ ದಾಖಲಿಸಿ (50*) ವಿಶ್ವಾಸ ಹೆಚ್ಚಿಸಿಕೊಂಡರು. 18.2 ಓವರ್ಗಳಲ್ಲಿ ಭಾರತ ಗೆದ್ದು ಬೀಗಿತು. ಅಮೆರಿಕದ ಪರ ಸೌರಭ್ ನೆಟ್ರಾವಾಲ್ಕರ್ 18 ರನ್ಗೆ 2 ವಿಕೆಟ್ ಕಿತ್ತು ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದರು.
ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಯುಎಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಅಮೆರಿಕ ಅರ್ಷದೀಪ್ (9ಕ್ಕೆ 4) ಮಾರಕ ದಾಳಿಗೆ ನಲುಗಿತು. ಮೊದಲ ಓವರ್ನಲ್ಲಿ 3 ರನ್ ಆಗುವಷ್ಟರಲ್ಲೇ 2 ವಿಕೆಟ್ ಉರುಳಿದವು. ಕಳೆದ ಪಂದ್ಯಗಳಲ್ಲಿ ಮಿಂಚಿದ್ದ ಆರೊನ್ ಜೋನ್ಸ್ ಕೂಡ 11 ರನ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಸ್ಟಿವನ್ ಟೇಲರ್ 24 ಹಾಗೂ ಎನ್ಆರ್ ಕುಮಾರ್ 27 ರನ್ ಗಳಿಸಿ ತಂಡಕ್ಕೆ ನೆರವಾದರು. ಬಳಿಕ ಕೋರಿ ಆ್ಯಂಡರ್ಸನ್ 15 ರನ್ ಬಾರಿಸಿದರು. ತದನಂತರ ಹರ್ಮಿತ್ ಸಿಂಗ್ 10 ಹಾಗೂ ವ್ಯಾನ್ ಸ್ಕಾಲ್ಕ್ವಿಕ್ 11 ರನ್ ಕಾಣಿಕೆಯಿಂದಾಗಿ ಯುಎಸ್ 20 ಓವರ್ಗಳಲ್ಲಿ 110 ರನ್ ಪೇರಿಸಿತ್ತು. ಭಾರತದ ಪರ ಅರ್ಷದೀಪ್ 9ಕ್ಕೆ 4 ಹಾಗೂ ಹಾರ್ದಿಕ್ ಪಾಂಡ್ಯ 14ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಅರ್ಷದೀಪ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
ಭಾರತವು ಗ್ರೂಪ್ ಹಂತದಲ್ಲಿ ಸತತ ಮೂರನೇ ಗೆಲುವಿನೊಂದಿಗೆ ಸೂಪರ್-8 ಹಂತ ತಲುಪಿದೆ. ಎ ಗ್ರೂಪ್ನಲ್ಲಿ ಮುಂದಿನ ಹಂತಕ್ಕೇರುವ ಮತ್ತೊಂದು ತಂಡ ಯಾವುದು ಎಂಬ ಕುತೂಹಲವಿದೆ. ಸೋತ ಯುಎಸ್ ತಂಡವು ರನ್ ರೇಟ್ನಲ್ಲಿ ಕುಸಿದಿದ್ದು, ಪಾಕಿಸ್ತಾನಕ್ಕೆ ಅವಕಾಶ ಹೆಚ್ಚಿಸಿದೆ. ಆದರೆ, ಎರಡೂ ತಂಡಗಳ ಐರ್ಲೆಂಡ್ ವಿರುದ್ಧದ ಪಂದ್ಯಗಳ ಮೇಲೆ ಸೂಪರ್-8 ಅರ್ಹತೆ ನಿರ್ಧಾರವಾಗಲಿದೆ. ಎರಡೂ ಟೀಂಗಳಿಗೆ ಗೆಲುವು ಅನಿವಾರ್ಯವಾಗಿದೆ. ಮುಂದಿನ ಪಂದ್ಯದಲ್ಲಿ ಭಾರತವು ಜೂನ್ 15ರಂದು ಕೆನಡಾ ವಿರುದ್ಧ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಕತಾರ್ ಮೋಸದಾಟಕ್ಕೆ ಭಾರತ ಫುಟ್ಬಾಲ್ ತಂಡ ಬಲಿ: ವಿಶ್ವಕಪ್ ಅರ್ಹತಾ ಟೂರ್ನಿಯಿಂದ ಔಟ್ - FIFA World Cup