ಬ್ರಿಡ್ಜ್‌ಟೌನ್: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬ್ಯಾಟರ್ಗಳಿಗಿಂತ ಬೌಲರ್ಗಳೇ ಪಾರಮ್ಯ ಮೆರೆಯುತ್ತಿದ್ದಾರೆ. ವಿಶ್ವದ ಘಟಾನುಘಟಿ ಟಿ-20 ಸ್ಪೆಷಲಿಸ್ಟ್ ಬ್ಯಾಟರ್ಗಳೂ ಕೂಡ ಬೌಲಿಂಗ್ ದಾಳಿಗೆ ತಲೆಬಾಗಿದ್ದು, ನಿಧಾನಗತಿಯ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಟಿ20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಕೂಡ ಚುಟುಕು ವಿಶ್ವಕಪ್‌ನಲ್ಲಿ ಪಿಚ್ ಸ್ವರೂಪಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಮುಂದಿನ ಪಂದ್ಯಗಳು ಕೆರಿಬಿಯನ್‌ನಲ್ಲಿ ನಡೆಯುತ್ತಿದ್ದು, ಕೊಂಚ ಸರಾಗವಾಗಿ ಬ್ಯಾಟ್ ಬೀಸಲು ನೆರವಾಗಲಿವೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.
ಭಾರತ ತಂಡವು ಗುರುವಾರ ಬಾರ್ಬಡೋಸ್ನಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಹಣಾಹಣಿಯ ಮೂಲಕ ಸೂಪರ್ 8 ಅಭಿಯಾನ ಆರಂಭಿಸಲಿದೆ. ಬಳಿಕ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಆಂಟಿಗುವಾ ಹಾಗೂ ಸೇಂಟ್ ಲೂಸಿಯಾದಲ್ಲಿ ನಡೆಯಲಿವೆ. ಇವೆರಡೂ ಮೈದಾನಗಳಲ್ಲಿ ಪಂದ್ಯಾವಳಿಯ ಅತ್ಯಧಿಕ ಮೊತ್ತಗಳು ದಾಖಲಾಗಿವೆ.
ನ್ಯೂಯಾರ್ಕ್‌ನಲ್ಲಿ ಅಮೆರಿಕ ವಿರುದ್ಧ ಅಲ್ಪಮೊತ್ತದ ಟಾರ್ಗೆಟ್ ಇದ್ದರೂ ಬ್ಯಾಟಿಂಗ್ ಸುಲಭವಿರಲಿಲ್ಲ. ಸೂರ್ಯಕುಮಾರ್ ಯಾದವ್ ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಮೆರಿಕ ವಿರುದ್ಧ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ್ದರು. ಟಿ20 ಕ್ರಿಕೆಟ್ನಲ್ಲಿ ಸೂರ್ಯ ಅವರ ಸರಾಸರಿ ಸ್ಟ್ರೈಕ್ ರೇಟ್ 168ಕ್ಕಿಂತ ಜಾಸ್ತಿ ಇರುವುದು ಗಮನಾರ್ಹವಾಗಿದೆ.
ಟೂರ್ನಿಯ ಬಗ್ಗೆ ಮಾತನಾಡಿರುವ ಸೂರ್ಯ, "ನೀವು ಎರಡು ವರ್ಷಗಳಿಂದ ನಂಬರ್ ಒನ್ ಬ್ಯಾಟರ್ ಆಗಿದ್ದುಕೊಂಡು, ವಿಭಿನ್ನ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುತ್ತ, ತಂಡದ ಅಗತ್ಯತೆಗೆ ತಕ್ಕಂತೆ ಆಟ ಬದಲಾಯಿಸಿಕೊಳ್ಳಬೇಕು. ಅದು ಉತ್ತಮ ಬ್ಯಾಟ್ಸ್‌ಮನ್‌ಶಿಪ್ ಅನ್ನು ತೋರಿಸುತ್ತದೆ. ಅದನ್ನೇ ನಾನು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.
"ಪಿಚ್ನಲ್ಲಿ ಯಾವುದೇ ವೇಗವಿಲ್ಲದಾಗ ಆಕ್ರಮಣಕಾರಿ ಆಟವಾಡುವುದು ಕಷ್ಟ. ಆ ಸಮಯದಲ್ಲಿ ದೀರ್ಘವಾದ ಇನ್ನಿಂಗ್ಸ್ ಆಡಬೇಕಾದರೆ ಬ್ಯಾಟಿಂಗ್ ಬಹಳ ಸ್ಮಾರ್ಟ್ ಆಗಿರಬೇಕು. ನೀವು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕು. ತಂಡದ ಬೇಡಿಕೆಗೆ ಅನುಗುಣವಾಗಿ ಆಡಬೇಕು. ತಾಳ್ಮೆಯ ಇನ್ನಿಂಗ್ಸ್ ಕಟ್ಟಬೇಕು'' ಎಂದರು.
"ನಾನು ಅಮೆರಿಕದಲ್ಲಿಯೂ ಸಂತಸದಿಂದಲೇ ಆಡುತ್ತಿದ್ದೆ, ಅಲ್ಲಿ ಬ್ಯಾಟಿಂಗ್ ಮಾಡಲು ಖುಷಿಯಿರಲಿಲ್ಲ ಎಂದಲ್ಲ. ಮೊದಲ ಬಾರಿಗೆ ಅಲ್ಲಿ ಆಡುತ್ತಿದ್ದೇವೆ, ಪರಿಸ್ಥಿತಿಗಳು ವಿಭಿನ್ನ ಹಾಗೂ ಸ್ವಲ್ಪ ಸವಾಲಿನಿಂದ ಕೂಡಿತ್ತು. ಆದರೆ, ವೆಸ್ಟ್ ಇಂಡೀಸ್ನಲ್ಲಿ ನಾವು ಈಗಾಗಲೇ ಆಡಿದ್ದೇವೆ. ಇಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ತಿಳಿದಿದೆ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್ ರೋಚಕ ಸೂಪರ್-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight
''ಕೆನ್ಸಿಂಗ್ಟನ್ ಓವಲ್‌ನಲ್ಲಿರುವ ಪಿಚ್ ಕಂದು ಬಣ್ಣವನ್ನು ಹೊಂದಿದೆ. ಈ ಹಿಂದಿನ ಕೊನೆಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡವು ಇಲ್ಲಿ ಆಡಿತ್ತು. ನ್ಯೂಯಾರ್ಕ್ ಪಿಚ್ ಕಠಿಣವಾಗಿತ್ತು. ಯಾಕೆಂದರೆ ಅದು ಹೊಸದಾಗಿತ್ತು. ಅಲ್ಲಿ ವಿಶ್ವಕಪ್ ಇದೆ ಎಂದು ತಿಳಿದ ಬಳಿಕ ಎಲ್ಲ ಸಿದ್ಧತೆ ಕೈಗೊಂಡು ನಿರ್ಮಿಸಲಾಗಿತ್ತು. ಇಲ್ಲಿ ನಿಯಮಿತ ಕ್ರಿಕೆಟ್ ನಡೆಯುವುದರಿಂದ, ಪಿಚ್ಗಳು ಹೆಚ್ಚು ಉತ್ತಮವಾಗಿವೆ" ಅವರು ಹೇಳಿದರು. "ಸ್ವೀಪ್‌ಗಳು ಮತ್ತು ರಿವರ್ಸ್ ಸ್ವೀಪ್‌ಗಳು ಯಾವಾಗಲೂ ನನ್ನ ಬಲ. ನಾನು ಅಭ್ಯಾಸದ ಅವಧಿಗಳಲ್ಲಿ ಅದೇ ರೀತಿ ಆಡಲು ಪ್ರಯತ್ನಿಸುತ್ತೇನೆ" ಎಂದರು.
ನಾಯಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ್ದು, ರಿಷಭ್ ಪಂತ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ಸೂರ್ಯಕುಮಾರ್ ಆಟ ಬದಲಿಸುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಹಾಗೇನೂ ಇಲ್ಲ. ಪಂದ್ಯದ ಸ್ವರೂಪಕ್ಕೆ ತಕ್ಕಂತೆ ಆಡಲು ಪ್ರಯತ್ನಿಸುತ್ತೇವೆ. ಆರಂಭಿಕ ವಿಕೆಟ್‌ಗಳಿದ್ದರೆ, ನೀವು ಇನ್ನೂ ಹೆಚ್ಚಿನ ರನ್‌ಗಳನ್ನು ಕಲೆಹಾಕಬೇಕು. ಆ ನಿಟ್ಟಿನಲ್ಲಿ ಬ್ಯಾಟಿಂಗ್ ಮಾಡಬೇಕು. ನಾವು ಕೂಡ ಅದನ್ನೇ ಪ್ರಯತ್ನಿಸುತ್ತೇವೆ. ಧನಾತ್ಮಕ ಮಾರ್ಗದಲ್ಲಿ ಮುನ್ನಡೆಯಲು ಪರಸ್ಪರ ಮಾತನಾಡಿಕೊಳ್ಳುತ್ತೇವೆ. ಎಲ್ಲ ನಿರ್ಧಾರ ಕೈಗೊಳ್ಳುವಿಕೆಯನ್ನು ಮ್ಯಾನೇಜ್‌ಮೆಂಟ್ ಆಟಗಾರರಿಗೆ ಬಿಟ್ಟಿದೆ" ಎಂದು ಹೇಳಿದರು.