ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರನೇ ಸಲ ಚಾಂಪಿಯನ್ ಪಟ್ಟಕ್ಕೇರಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಕೆಕೆಆರ್ ಆಟಗಾರರ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು.
ಖುಷಿಯಿಂದ ಕುಣಿದು ಕುಪ್ಪಳಿಸಿದ ಕೋಲ್ಕತ್ತಾ ಆಟಗಾರರು, ತರಬೇತುದಾರರು ಇತರ ಸಿಬ್ಬಂದಿ ಪರಸ್ಪರ ಆಟಗಾರರನ್ನು ಎತ್ತಿ ಸಂಭ್ರಮಿಸಿದರು. ಈ ಬಾರಿ ಮೆಂಟರ್ ಆಗಿ ನೈಟ್ ರೈಡರ್ಸ್ ತಂಡಕ್ಕೆ ಮರಳಿದ್ದ ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ಗೆಲುವಿನ ಅಲೆಯಲ್ಲಿ ತೇಲಿದರು. ಸಹ ಆಟಗಾರ ವೆಸ್ಟ್ ಇಂಡೀಸ್ನ ಸುನೀಲ್ ನರೈನ್ ಅವರನ್ನು ಗಂಭೀರ್ ಎತ್ತಿಕೊಂಡರಲ್ಲದೆ, ಬಳಿಕ ನರೈನ್ ಕೂಡ ತಮ್ಮ ಮೆಂಟರ್ ಅನ್ನು ಬಿಗಿದಪ್ಪಿ ಎತ್ತಿಕೊಂಡು ಸಂತಸಪಟ್ಟರು.
ಆಟದ ವೇಳೆ ಹೆಚ್ಚು ಖುಷಿ ವ್ಯಕ್ತಪಡಿಸದೆ, ಸದಾ ಗಂಭೀರ ಸ್ವಭಾವದಲ್ಲೇ ಕಂಡುಬರುವ ಇಬ್ಬರೂ ಆಟಗಾರರ ಈ ಅಪರೂಪದ ಸಂಭ್ರಮಾಚರಣೆ ಎಲ್ಲರ ಗಮನ ಸೆಳೆಯಿತು. ಅಲ್ಲದೆ, ಕ್ರಿಕೆಟ್ ವಲಯದಲ್ಲಿಯೂ ಕೂಡ ಗಂಭೀರ್ ಹಾಗೂ ಕೋಲ್ಕತ್ತಾ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಗೌತಮ್ ಎಕ್ಸ್ ಪೋಸ್ಟ್: ಚಾಂಪಿಯನ್ ತಂಡದ ಸಂಭ್ರಮಾಚರಣೆ ಬೆನ್ನಲ್ಲೇ ಗಂಭೀರ್ ಮಾಡಿರುವ ಎಕ್ಸ್ ಪೋಸ್ಟ್ವೊಂದು ಸಾಕಷ್ಟು ವೈರಲ್ ಆಗುತ್ತಿದೆ. 'ಯಾರ ಆಲೋಚನೆಗಳು ಹಾಗೂ ಕೆಲಸಗಳು ಸತ್ಯದಿಂದ ಕೂಡಿರುತ್ತವೆಯೋ ಅಂಥವರ ರಥವನ್ನು ಶ್ರೀ ಕೃಷ್ಣ ಇಂದಿಗೂ ಮುನ್ನಡೆಸುತ್ತಾನೆ' ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ಜನರು ಲೈಕ್, ರೀಪೋಸ್ಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಚೆನ್ನೈನಲ್ಲಿ ಭಾನುವಾರ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ಗೆ ಶಾಕ್ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದು ಬೀಗಿತು. ಇದರೊಂದಿಗೆ ಮೂರನೇ ಬಾರಿಗೆ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿದೆ. ಈ ಹಿಂದೆ 2012 ಹಾಗೂ 2014ರಲ್ಲಿ ಚಾಂಪಿಯನ್ ಆಗಿದ್ದಾಗ ಗೌತಮ್ ಗಂಭೀರ್ ಮುಂದಾಳತ್ವ ವಹಿಸಿದ್ದರು. ಈ ಸಲ ಮೆಂಟರ್ ಆಗಿರುವ ಗಂಭೀರ್ ತಂಡ 10 ವರ್ಷಗಳ ಬಳಿಕ ಮತ್ತೊಮ್ಮೆ ಸಾಧನೆ ಮಾಡಿರುವುದು ವಿಶೇಷ.
ಗಂಭೀರ್ ಸಂದೇಶ: ಗೆಲುವಿನ ಬಳಿಕ ಕೋಲ್ಕತ್ತಾ ಆಟಗಾರ ನಿತೀಶ್ ರಾಣಾ ಮೆಂಟರ್ ಗಂಭೀರ್ ಕುರಿತಾದ ವಿಚಾರವೊಂದನ್ನು ಹಂಚಿಕೊಂಡರು. ಕೆಕೆಆರ್ ಮಾರ್ಗದರ್ಶಕರಾಗಿ ಘೋಷಿಸಲ್ಪಟ್ಟ ಬಳಿಕ ಗಂಭೀರ್ ತಮಗೆ ನೀಡಿದ ಪ್ರೇರಣಾದಾಯಕ ಪ್ರತಿಕ್ರಿಯೆ ಕುರಿತಂತೆ ಹೇಳಿಕೊಂಡರು. ಗಂಭೀರ್ (GG ಭಯ್ಯಾ) ಅವರನ್ನು ತಂಡದ ಮಾರ್ಗದರ್ಶಕರಾಗಿ ಆಯ್ಕೆ ಮಾಡಿದಾಗ ಬಹಳ ಸಂತಸಗೊಂಡ ನಾನು ಅವರಿಗೆ ದೀರ್ಘ ಸಂದೇಶವೊಂದನ್ನು ಕಳುಹಿಸಿದ್ದೆ. ಅದನ್ನೀಗ ಹೇಳಿಕೊಳ್ಳಲು ಬಯಸುತ್ತೇನೆ. ನನ್ನ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಗಂಭೀರ್, 'ಧನ್ಯವಾದ, ಆದರೆ ನಾವು ವೇದಿಕೆ ಮೇಲೆ ಪ್ರಶಸ್ತಿಯನ್ನು ಎತ್ತಿ ಹಿಡಿದು ನಿಂತರೆ ಮಾತ್ರ ನನಗೆ ಸಂತಸವಾಗುತ್ತದೆ' ಎಂದಿದ್ದರು. ಇಂದು ಅವರು ಹೇಳಿದ ಆ ದಿನ ಬಂದಿದೆ. ಆ ಸಂದೇಶವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಸಂಭ್ರಮಾಚರಣೆ ವೇಳೆ ನೆನಪಿಸಿಕೊಂಡರು.
ಇದೇ ವೇಳೆ ಆಲ್ರೌಂಡರ್ ಸುನೀಲ್ ನರೈನ್ ಕೂಡ ಗಂಭೀರ್ ಅವರನ್ನು ಹೊಗಳಿದರು. "ಮೈದಾನಕ್ಕಿಳಿದು ನನ್ನ ಆಟ ತೋರ್ಪಡಿಸಲು ಹಾಗೂ ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ಗಂಭೀರ್ ಅವರ ಬೆಂಬಲ ಸಾಕಷ್ಟಿದೆ. ಅದು ಅತ್ಯಮೂಲ್ಯವಾದುದು'' ಎಂದು ಹೇಳಿಕೊಂಡರು.