Virendra Sehwag 46th Birthday: ವೀರೇಂದ್ರ ಸೆಹ್ವಾಗ್. ಈ ಹೆಸರು ಕೇಳದ ಕ್ರಿಕೆಟ್ ಅಭಿಮಾನಿಗಳಿದ್ದಾರೆಯೇ?. ಟೆಸ್ಟ್ ಕ್ರಿಕೆಟ್‌ನಲ್ಲೂ ವೀರೂ ಟಿ20 ಶೈಲಿಯಲ್ಲೇ ಬ್ಯಾಟ್ ಬೀಸುತ್ತಿದ್ದರು. ಬಿರುಸಿನ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್ಗಳಲ್ಲಿ ಭಯ ಹುಟ್ಟಿಸುವುದು ಇವರ ಅಭ್ಯಾಸ. ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ಭಾರತವನ್ನು ಹಲವು ಬಾರಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಇಂಥ ದಿಗ್ಗಜ ಬ್ಯಾಟರ್‌ಗಿಂದು 46ನೇ ಹುಟ್ಟುಹಬ್ಬ!.
ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ಸೆಹ್ವಾಗ್ 1999ರಿಂದ 2013ರವರೆಗೆ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
374 intl. matches 👌
— BCCI (@BCCI) October 20, 2024
17,253 intl. runs 👏
Only #TeamIndia cricketer with two Test triple tons 🙌
Here's wishing the 2⃣0⃣0⃣7⃣ World T20 & 2⃣0⃣1⃣1⃣ World Cup-winner, @virendersehwag, a very Happy Birthday! 🎂👏 pic.twitter.com/VeHGjFH5Qf
ಟೆಸ್ಟ್‌ನಲ್ಲಿ 2 ತ್ರಿಶತಕ: ಭಾರತದ ಅನೇಕ ದಿಗ್ಗಜ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಇದುವರೆಗೂ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸುವಲ್ಲಿ ಇಬ್ಬರು ಮಾತ್ರ ಯಶಸ್ವಿಯಾಗಿದ್ದಾರೆ. ಅವರೇ ಸೆಹ್ವಾಗ್ ಮತ್ತು ಕರುಣ್ ನಾಯರ್. ಭಾರತದ ಪರ ಮೊದಲ ತ್ರಿಶತಕ ಬಾರಿಸಿದವರು ವೀರೇಂದ್ರ ಸೆಹ್ವಾಗ್ ಆಗಿದ್ದಾರೆ. 2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ 375 ಎಸೆತಗಳಲ್ಲಿ 309ರನ್ ಗಳಿಸಿದ್ದರು.
2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 304 ಎಸೆತಗಳಲ್ಲಿ 319 ರನ್‌ಗಳೊಂದಿಗೆ ಬಿರುಸಿನ ತ್ರಿಶತಕ ಸಿಡಿಸಿದ್ದರು. ಆ ಸಮಯದಲ್ಲಿ ಎರಡು ತ್ರಿಶತಕಗಳನ್ನು ಸಿಡಿಸಿದ ಏಕೈಕ ಭಾರತೀಯ ಆಟಗಾರರಾಗಿದ್ದರು. 2016ರಲ್ಲಿ ಕರುಣ್ ನಾಯರ್ ತ್ರಿಶತಕ ಬಾರಿಸಿ ಈ ಪಟ್ಟಿ ಸೇರಿದ್ದಾರೆ.
ಕಡಿಮೆ ಎಸೆತಗಳಲ್ಲಿ ಟ್ರಿಪಲ್ ಸೆಂಚುರಿ: ಸೆಹ್ವಾಗ್ 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 278 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದರು. ಹಾಗಾಗಿ, ಟೆಸ್ಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿದ ವಿಶ್ವದಾಖಲೆಯೂ ಇವರ ಹೆಸರಲ್ಲಿದೆ. ಈ ದಾಖಲೆ ಈಗಲೂ ತಮ್ಮದೇ ಹೆಸರಿನಲ್ಲಿದ್ದು, ಇದನ್ನೂ ಮುರಿಯುವುದು ಕಷ್ಟವಾಗಿದೆ.
ಟೆಸ್ಟ್ ಎಂದರೆ ಬ್ಯಾಟರ್‌ಗಳ ತಾಳ್ಮೆ ಪರೀಕ್ಷಿಸುವ ಆಟ ಎನ್ನಲಾಗುತ್ತದೆ. ಆದರೆ ಸೆಹ್ವಾಗ್ ಇದಕ್ಕೆ ವಿರುದ್ಧವಾಗಿದ್ದರು. ಒಮ್ಮೆ ಲಯಕ್ಕೆ ಬಂದರೆ ಇವರನ್ನು ತಡೆಯುವುದು ಎದುರಾಳಿಗಳಿಗೂ ಕಷ್ಟವಾಗುತಿತ್ತು. 284 ರನ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸೆಹ್ವಾಗ್ ಹೊಂದಿದ್ದಾರೆ. 2009ರಲ್ಲಿ ಮುಂಬೈನ ಬ್ರಬೋರ್ನ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
ನಾಯಕನಾಗಿ ಅತಿ ಹೆಚ್ಚು ರನ್ ಸಾಧನೆ: ಸೆಹ್ವಾಗ್ ODIನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ಡಿಸೆಂಬರ್ 2011ರಂದು ಏಕೈಕ ದ್ವಿಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. 149 ಎಸೆತಗಳಲ್ಲಿ 219 ರನ್ ಗಳಿಸಿದ್ದರು. ಇದು ಆ ಸಮಯದಲ್ಲಿ ODIಗಳಲ್ಲಿ ಅತ್ಯಧಿಕ ಇನ್ನಿಂಗ್ಸ್ ಆಗಿತ್ತು. ನಂತರ ರೋಹಿತ್ ಶರ್ಮಾ ಅವರ 264 ರನ್‌ಗಳ ಮೂಲಕ ಈ ದಾಖಲೆ ಮುರಿದರು. ಇದರ ಹೊರತಾಗಿಯೂ ನಾಯಕನಾಗಿ ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಈಗಲೂ ಸೆಹ್ವಾಗ್ ಹೆಸರಿನಲ್ಲಿದೆ.
ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ: ಸೆಹ್ವಾಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 104 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 23 ಶತಕ ಮತ್ತು 32 ಅರ್ಧಶತಕಗಳೊಂದಿಗೆ 8,586 ರನ್ ಗಳಿಸಿದ್ದಾರೆ. ಅಲ್ಲದೆ 40 ವಿಕೆಟ್‌ಗಳನ್ನೂ ಪಡೆದಿದ್ದಾರೆ.
ODIಗಳಲ್ಲಿ, 251 ಪಂದ್ಯಗಳ ಮೂಲಕ 15 ಶತಕ ಮತ್ತು 38 ಅರ್ಧಶತಕಗಳೊಂದಿಗೆ 8,273 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಉರುಳಿಸಿದ್ದಾರೆ.
ಸೆಹ್ವಾಗ್ 19 ಟಿ20 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 394 ರನ್ ಗಳಿಸಿದ್ದಾರೆ.