ನವದೆಹಲಿ: ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ಭಾರತ ತಂಡವನ್ನು ನಾಯಕ ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ರೋಹಿತ್ ನಾಯಕತ್ವದಲ್ಲೇ ಟೀಂ ಇಂಡಿಯಾ ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ನಂತರ ವಿಶ್ವ ಟ್ರೋಫಿ ಗೆದ್ದ ಮೂರನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ 37 ವರ್ಷದ ರೋಹಿತ್, ಈಗಾಗಲೇ ಟಿ-20 ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಹೀಗಾಗಿ, ಏಕದಿನ ಮತ್ತು ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವವರು ಯಾರೆಂಬ ಕುತೂಹಲ ಉಂಟಾಗಿತ್ತು.
ಇದರ ನಡುವೆ ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ, ''ಡಬ್ಲ್ಯುಟಿಸಿ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿ ನಮ್ಮ ನಮ್ಮ ಮುಂದಿನ ಗುರಿ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಎರಡೂ ಟೂರ್ನಿಗಳಲ್ಲಿ ನಾವು ಚಾಂಪಿಯನ್ ಆಗುತ್ತೇವೆ'' ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
#WATCH | BCCI Secretary Jay Shah congratulates the Indian cricket team on winning the ICC T20 World Cup
— ANI (@ANI) July 7, 2024
He says, " ...i am confident that under the captaincy of rohit sharma, we will win the wtc final and the champions trophy..."
(source: bcci) pic.twitter.com/NEAvQwxz8Y
ಇದನ್ನೂ ಓದಿ: ಯುವ ಕ್ರಿಕೆಟಿಗರು ತಾವು ಪ್ರವೇಶಿಸಿದ ತಕ್ಷಣವೇ ತೋರಿದ ಪ್ರದರ್ಶನ ನೋಡಿ ಖುಷಿಯಾಯಿತು: ಕೋಚ್ ಅನುಭವ ಬಿಚ್ಚಿಟ್ಟ ದ್ರಾವಿಡ್
ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಿಗದಿಯಾಗಿದೆ. ಕೊನೆಯದಾಗಿ ಈ ಟೂರ್ನಿಯು ಯುಕೆಯಲ್ಲಿ 2017ರಲ್ಲಿ ನಡೆದಿತ್ತು. ಈಗ ಎಂಟು ವರ್ಷಗಳ ನಂತರ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದರ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಲಾಗಿದೆ. ಮತ್ತೊಂದೆಡೆ, ಬಿಸಿಸಿಐ ಇನ್ನೂ ವೇಳಾಪಟ್ಟಿಗೆ ಹಸಿರು ನಿಶಾನೆ ತೋರಿಸಿಲ್ಲ.
2023ರ ಏಕದಿನ ಏಷ್ಯಾ ಕಪ್ ರೀತಿಯಲ್ಲೇ 'ಹೈಬ್ರಿಡ್ ಮಾದರಿ'ಗಾಗಿ ಬಿಸಿಸಿಐ ಮತ್ತೊಮ್ಮೆ ಒತ್ತಾಯಿಸುತ್ತದೆ ಎಂದು ತಿಳಿದು ಬಂದಿದೆ. ಈ ಟೂರ್ನಿಗಾಗಿ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳಿರಲಿಲ್ಲ. ಬದಲಿಗೆ, ಪಾಕಿಸ್ತಾನದ ವಿರುದ್ಧದ ಪಂದ್ಯಗಳು ಸೇರಿದಂತೆ ಭಾರತದ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿಸಲಾಗಿತ್ತು.
ಟಿ-20ಗೆ ಪಾಂಡ್ಯ ಸಾರಥ್ಯ?: ಇದೇ ವೇಳೆ, ಜಯ್ ಶಾ ಈ ಸಂದೇಶವು ರೋಹಿತ್ ಟಿ-20ಯಂತೆ ಇತರ ಸ್ವರೂಪಗಳ ನಾಯಕತ್ವವನ್ನು ತ್ಯಜಿಸುತ್ತಾರೆಯೇ ಎಂಬ ಊಹಾಪೋಹಗಳಿಗೆ ಒಂದು ರೀತಿಯಲ್ಲಿ ತೆರೆ ಎಳೆದಿದೆ. ರೋಹಿತ್ ನಾಯಕತ್ವ ತ್ಯಜಿಸುವವರೆಗೆ ಟೀಂ ಇಂಡಿಯಾವು ಏಕದಿನ, ಟೆಸ್ಟ್ ಹಾಗೂ ಟಿ-20 ಮಾದರಿಗೆ ಬೇರೆ ನಾಯಕರು ಇರಲಿದ್ದಾರೆ. ಏಕದಿನ, ಟೆಸ್ಟ್‌ನಲ್ಲಿ ತಂಡವನ್ನು ರೋಹಿತ್ ಮುನ್ನಡೆಸಿದರೆ, ಚುಟುಕು ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಮುಂದಾಳತ್ವ ವಹಿಸುವ ನಿರೀಕ್ಷೆಯಿದೆ.
ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್‌ನ ಫೈನಲ್‌ಗೆ ಭಾರತ ತಂಡವನ್ನು ರೋಹಿತ್ ಕೊಂಡೊಯ್ದಿದ್ದರು. ವಿಶ್ವಕಪ್‌ನಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ನೇರವಾಗಿ ಅಂತಿಮ ಹಂತ ತಲುಪಿತ್ತು. ಆದರೆ, ಪ್ರಶಸ್ತಿ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು. ಆದರೆ, ಇದಾಗಿ ಕೆಲವೇ ತಿಂಗಳಲ್ಲೇ ನಡೆದ ಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಟೀಂ ಇಂಡಿಯಾ ಹೊರಹೊಮ್ಮಿದೆ. ಈ ಗೆಲುವನ್ನು ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ ಶಾ ಅರ್ಪಿಸಿದ್ದಾರೆ.
ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್, ಕೊಹ್ಲಿ ಮತ್ತು ಜಡೇಜಾ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳು ನಿಗದಿಯಾಗಿದ್ದು, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳು ನಡೆಯಲಿವೆ. ಫೆಬ್ರವರಿ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.
ಇದನ್ನೂ ಓದಿ: ಟೀಂ ಇಂಡಿಯಾ ತವರಿನ ಕ್ರಿಕೆಟ್ ಸರಣಿಗಳ ವೇಳಾಪಟ್ಟಿ ಪ್ರಕಟ