ಬರ್ಲಿನ್ (ಜರ್ಮನಿ): 2024ರ ಯೂರೋ ಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸ್ಪೇನ್ ತಂಡವು ಮಣಿಸಿತು. ಈ ಪಂದ್ಯದಲ್ಲಿ ಆಟಗಾರ ಮೈಕೆಲ್ ಒಯಾರ್ಜಾಬಲ್ ಅವರು 87ನೇ ನಿಮಿಷದಲ್ಲಿ ಗೋಲು ಹೊಡೆದು ಸ್ಪೇನ್ ತಂಡದ ಐತಿಹಾಸಿಕ ಗೆಲುವಿಗೆ ಕಾರಣರಾದರು. ಇಲ್ಲದಿದ್ದರೆ, ಪಂದ್ಯವು ಪೆನಾಲ್ಟಿ ಶೂಟೌಟ್‌ನತ್ತ ಸಾಗುತ್ತಿತ್ತು.
2024 CHAMPIONS: Spain 🇪🇸#EURO2024 pic.twitter.com/8jGoI5ZSv0
— UEFA EURO 2024 (@EURO2024) July 14, 2024
ಭಾನುವಾರ ನಡೆದ ರೋಚಕ ಪುಟ್ಬಾಲ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ತಂಡವು 2-1 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿ, 2024ರ ಯುರೋ ಕಪ್ನ್ನು ತನ್ನಾಗಿಸಿಕೊಂಡಿದೆ. ನಾಲ್ಕನೇ ಬಾರಿ ಯುರೋಪಿಯನ್ ಪ್ರಶಸ್ತಿ ಗೆದ್ದ ಸ್ಪೇನ್ ನೂತನ ದಾಖಲೆ ನಿರ್ಮಿಸಿದೆ. 12 ವರ್ಷಗಳ ನಂತರ ಸ್ಪೇನ್ ಯುರೋ ಕಪ್‌ನಲ್ಲಿ ಜಯ ಸಾಧಿಸಿದೆ.
ಮತ್ತೊಂದೆಡೆ, ಗರೆಥ್ ಸೌತ್‌ಗೇಟ್ ಅವರ ಇಂಗ್ಲೆಂಡ್ ತಂಡವು ಸತತ ಎರಡನೇ ಬಾರಿ ಫೈನಲ್ ಪಂದ್ಯವನ್ನು ಸೋತಿದೆ. ಇದಕ್ಕೂ ಮೊದಲು 2020ರಲ್ಲಿ ನಡೆದ ಯೂರೋ ಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ಸೋಲು ಅನುಭವಿಸಿತ್ತು. 2020ರ ಪಂದ್ಯಾವಳಿಯಲ್ಲಿ ಇಟಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿತು. ಈ ಮೂಲಕ ಸತತ ಎರಡು ಫೈನಲ್‌ಗಳನ್ನು ಆಡಿದ ಇಂಗ್ಲೆಂಡ್‌ಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.
2024ರ ಯುರೋ ಕಪ್ ಫೈನಲ್ ಪಂದ್ಯ ಹಣಾಹಣಿ: ಸ್ಪೇನ್ ಮತ್ತು ಇಂಗ್ಲೆಂಡ್ ನಡುವೆ ನಡೆದ 2024ರ ಯುರೋ ಕಪ್ ಫೈನಲ್ ಪಂದ್ಯದ ಮೊದಲಾರ್ಧವು ಸ್ಕೋರ್ ಸೊನ್ನೆ ಆಗಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳು ಒಂದೇ ಒಂದೂ ಗೋಲು ಗಳಿಸಲು ಸಾಧ್ಯವಾಗದಿದ್ದರೂ ದ್ವಿತೀಯಾರ್ಧದ ಆರಂಭದಲ್ಲೇ ರೋಚಕತೆ ಮತ್ತಷ್ಟು ಹೆಚ್ಚಾಯಿತು.
ದ್ವಿತೀಯಾರ್ಧ ಆರಂಭವಾದ ಕೂಡಲೇ ಪಂದ್ಯದ 47ನೇ ನಿಮಿಷದಲ್ಲಿ ಸ್ಪೇನ್ 1-0 ಮುನ್ನಡೆ ಸಾಧಿಸಿತು. ನಿಕೊ ವಿಲಿಯಮ್ಸ್ ತಂಡಕ್ಕೆ ಮೊದಲ ಗೋಲು ದಾಖಲಿಸಿದರು. ಪಂದ್ಯದ ಆರಂಭದ ನಂತರ ಸ್ಪೇನ್ ಕೆಲಕಾಲ ಮುನ್ನಡೆ ಕಾಯ್ದುಕೊಂಡರೂ 73ನೇ ನಿಮಿಷದಲ್ಲಿ ಇಂಗ್ಲೆಂಡ್ ಸಮಬಲ ಸಾಧಿಸಿತು. ಇಂಗ್ಲೆಂಡಿನ ಪಾಮರ್ ಈ ಸಮಬಲದ ಗೋಲು ಗಳಿಸಿದರು.
ಅಂತಿಮವಾಗಿ ಮುನ್ನಡೆ ಸಾಧಿಸಿ ಗೆದ್ದ ಸ್ಪೇನ್: 1-1ರಲ್ಲಿ ಪಂದ್ಯ ನಡೆಯುತ್ತಿದ್ದು, ಒಂದು ಹಂತದಲ್ಲಿ 2020ರಂತೆಯೇ ಈ ಬಾರಿಯೂ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್ ನಡೆಯಲಿದೆ ಎಂದು ಎಲ್ಲರೂ ಭಾವಿಸಿದ್ದರು. ಪಂದ್ಯದ 86ನೇ ನಿಮಿಷದಲ್ಲಿ ಸ್ಪೇನ್ ಎರಡನೇ ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. ಒಯಾರ್ಜಬಲ್ ಸ್ಪೇನ್ ಪರ ಎರಡನೇ ಮತ್ತು ಗೆಲುವಿನ ಗೋಲು ಗಳಿಸಿದರು. ಇಲ್ಲಿಂದ ಇಂಗ್ಲೆಂಡ್ ಹಿನ್ನಡೆ ಸಾಧಿಸಿ ಕೊನೆಗೆ ಸೋಲುಣಬೇಕಾಯಿತು. 90 ನಿಮಿಷಗಳ ನಂತರ 4 ನಿಮಿಷಗಳ ಹೆಚ್ಚುವರಿ ಸಮಯವೂ ಲಭ್ಯವಿದ್ದರೂ, ಅದರಲ್ಲಿಯೂ ಗೋಲು ಗಳಿಸಲು ಇಂಗ್ಲೆಂಡ್ ವಿಫಲವಾಯಿತು.