ಶಿರಡಿ (ಮಹಾರಾಷ್ಟ್ರ): ಭಾರತ ಕ್ರಿಕೆಟ್ ತಂಡದಿಂದ ಸದ್ಯಕ್ಕೆ ದೂರು ಉಳಿದಿರುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿರುವ ಇಶಾನ್ ಕಿಶನ್ ಇಂದು (ಗುರುವಾರ) ಇಲ್ಲಿನ ಶಿರಡಿ ಸಾಯಿ ಮಂದಿರಕ್ಕೆ ಭೇಟಿ ನೀಡಿ ಬಾಬಾರ ದರ್ಶನ ಪಡೆದರು. ಕಿಶನ್ರ ಜನ್ಮದಿನವಾದ್ದರಿಂದ ಅವರು ಶಿರಡಿ ದರ್ಶನಕ್ಕೆ ಬಂದಿದ್ದರು.
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 26ನೇ ವಸಂತಕ್ಕೆ ಕಾಲಿಟ್ಟರು. ಜನ್ಮದಿನದ ಹಿನ್ನೆಲೆ ಮಂದಿರದ ಅಧಿಕಾರಿಗಳು ಕ್ರಿಕೆಟಿಗನಿಗೆ ಬೆಳಗಿನ ಕಾಕಡ್ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಆರತಿಯ ನಂತರ, ಸಾಯಿಬಾಬಾರ ಗುರುಸ್ಥಾನ, ದ್ವಾರಕಾಮಾಯಿಗೂ ಭೇಟಿ ನೀಡಿದರು. ಮಂದಿರದ ಮುಖ್ಯಸ್ಥ ವಿಷ್ಣು ಥೋರಟ್ ಅವರು ಸಾಯಿ ಶಾಲು, ಬಾಬಾರ ಊದಿಯನ್ನು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಕಿಶನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಮಂದಿರದಲ್ಲಿ ಕೇಕ್ ಕಟಿಂಗ್: ಇಶಾನ್ ಕಿಶನ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಗೆಳೆಯರಾದ ಸಂಜಯ್ ಕೋಟ್ಕರ್ ಮತ್ತು ದೀಪಕ್ ಸಾಳುಂಕೆ ಸೇರಿದಂತೆ ಇತರರರು ಜೊತೆಗಿದ್ದರು. ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿದರು.
ಬಿಹಾರ ಮೂಲದ ಆಟಗಾರ 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿದರು. ಇದುವರೆಗೆ 32 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 124 ಸ್ಟ್ರೈಕ್ರೇಟ್ನಲ್ಲಿ 796 ರನ್ ಗಳಿಸಿದ್ದಾರೆ. 27 ಏಕದಿನದಲ್ಲಿ ಒಂದು ದ್ವಿಶತಕ ಸಮೇತ 933 ರನ್ ದಾಖಲಿಸಿದ್ದಾರೆ. ಟೆಸ್ಟ್ನಲ್ಲಿ ಆಡಿದ 2 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿ 78 ರನ್ ಮಾಡಿದ್ದಾರೆ.
ತಂಡದಲ್ಲಿ ಸ್ಪರ್ಧೆ ಹೆಚ್ಚಿರುವ ಕಾರಣ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಕೈಬಿಟ್ಟ ನಂತರ ಅವರು ಪುನರಾಗಮನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಹಲವು ತಿಂಗಳಿನಿಂದ ಅವರು ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇನ್ನೂ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಕಿಶನ್, 135 ಸ್ಟ್ರೈಕ್ರೇಟ್ನಲ್ಲಿ 2,644 ರನ್ ಗಳಿಸಿದ್ದಾರೆ.