ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸಂಘಟಿತ ಬೌಲಿಂಗ್ ದಾಳಿಗೆ ಮಂಕಾದ ಚೆನ್ನೈ ಸೂಪರ್ ಕಿಂಗ್ಸ್ 166 ರನ್ಗಳ ಗುರಿ ನೀಡಿದೆ.
ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ ಚೆನ್ನೈ 165 ರನ್ ಗಳಿಸಿತು. ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಚೆನ್ನೈ ಆಟಗಾರರು ನಿರಾಸೆ ಮೂಡಿಸಿದರು. ಮಾಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್ ಶಿವಂ ದುಬೆ ಅಬ್ಬರಿಸಿದ್ದು ಬಿಟ್ಟರೆ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.
ಹೈದರಾಬಾದ್ ಎದುರು ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಜೋಡಿ ರನ್ ಖಾತೆ ತೆರೆದರು. ರಚಿನ್ 2 ಬೌಂಡರಿ ಹೊಡೆದು 12 ರನ್ಗಳಿಗೆ ಬೇಗ ಔಟ್ ಆದರು. ಇನ್ನು ಋತುರಾಜ್ ಗಾಯಕ್ವಾಡ್ ಕೂಡಾ 26 ರನ್ಗಳಿಗೆ ವಿಕೆಟ್ ಕಳೆದುಕೊಂಡರು. ಈ ಹಂತದಲ್ಲಿ ಚೆನ್ನೈ 54 ರನ್ಗಳಿಗೆ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಬಳಿಕ 3ನೇ ವಿಕೆಟ್ಗೆ ಒಂದಾದ ಅನುಭವಿ ಅಜಿಂಕ್ಯ ರಹಾನೆ ಮತ್ತು ಸ್ಟೋಟಕ ಆಟಗಾರ ಶಿವಂ ದುಬೆ ನಿಧಾನವಾಗಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ರಹಾನೆ ನಿಧಾನಗತಿಯಲ್ಲಿ ಆಟವಾಡುವ ಮೂಲಕ ಶಿವಂ ದುಬೆ ದೊಡ್ಡ ಹೊಡೆತಗಳನ್ನು ಹೊಡೆಯಲು ಸಾಥ್ ನೀಡಿದರು. 2 ಬೌಂಡರಿ ಹಾಗು 1 ಸಿಕ್ಸರ್ಗಳೊಂದಿಗೆ 35 ರನ್ ಗಳಿಸಿ ವಿಕೆಟ್ ಕಾಪಾಡಿಕೊಂಡ ರಹಾನೆ, ಜಯದೇವ್ ಉನದ್ಕತ್‌ಗೆ ವಿಕೆಟ್ ಒಪ್ಪಿಸಿದರು.
ನಂತರ ರವೀಂದ್ರ ಜಡೇಜಾ ಅವರೊಂದಿಗೆ ಶಿವಂ ದುಬೆ ತಮ್ಮ ಅಬ್ಬರ ಮುಂದುವರೆಸಿದರು. ಕೇವಲ 24 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 2 ಬೌಂಡರಿಸಹಿತ 45 ರನ್ಗಳ ಕೊಡುಗೆ ನೀಡಿದರು, ನಂತರ ಪ್ಯಾಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಬಳಿಕ ಬಂದ ಡೇರಿಲ್ ಮಿಚೆಲ್ ಕೂಡ 13 ರನ್ಗಳಿಗೆ ಆಟ ನಿಲ್ಲಿಸಿದರು. ಕೊನೆಯಲ್ಲಿ ಜಡೇಜಾ ಉತ್ತಮ ಆಟವಾಡಿ ಗಮನ ಸೆಳೆದರು. ಆಕರ್ಷಕ 4 ಬೌಂಡರಿ ಹೊಡೆಯುವ ಮೂಲಕ 31 ರನ್ಗಳಿಸಿ ಎಂ.ಎಸ್. ಧೋನಿ (1) ಅವರೊಂದಿಗೆ ವಿಕೆಟ್ ಉಳಿಸಿಕೊಂಡರು.
ಹೈದರಾಬಾದ್ ಪರ ಏಳು ಆಟಗಾರರು ಬೌಲಿಂಗ್ ಮಾಡಿರುವುದು ವಿಶೇಷವಾಗಿತ್ತು. ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕತ್, ಭುವನೇಶ್ವರ್ ಕುಮಾರ್ ಮತ್ತು ಟಿ.ನಟರಾಜನ್ ತಲಾ ಒಂದು ವಿಕೆಟ್ ಪಡೆದು ಚೆನ್ನೈ ರನ್ ವೇಗ ತಗ್ಗಿಸಿದರು. ಅಭಿಷೇಕ್ ಶರ್ಮಾ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ಮಾಡಿದರು.
ತಂಡಗಳು : ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಸನ್‌ರೈಸರ್ಸ್ ಹೈದರಾಬಾದ್ : ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್‌ರಾಮ್, ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಜಯದೇವ್ ಉನದ್ಕತ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್
ಇದನ್ನೂ ಓದಿ: ಐಪಿಎಲ್ 2024: ಗುಜರಾತ್ ಪರ 50 ವಿಕೆಟ್ ಪಡೆದ ಮೊದಲ ಆಟಗಾರ ಹೆಗ್ಗಳಿಕೆಗೆ ಪಾತ್ರವಾದ ರಶೀದ್ ಖಾನ್ - RASHID KHAN