ಚೆನ್ನೈ: ಬಾಂಗ್ಲಾದೇಶ ವಿರುದ್ಧ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಇಂದಿನಿಂದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ನಾಲ್ಕು ಬ್ಯಾಟರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಭಾರತದ ಬ್ಯಾಟರ್‌ಗಳಿಗೆ ಬಾಂಗ್ಲಾ ಯುವ ಬೌಲರ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಶಾಕ್ ನೀಡಿದರು. ಇದರಿಂದ ಕ್ರೀಸ್ನಲ್ಲಿ ನೆಲೆಯೂರಲು ಸಾಧ್ಯವಾಗದೇ ಟಾಪ್ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಹಾಗು ರಿಷಭ್ ಪಂತ್ ಪೆವಿಲಿಯನ್ ಸೇರಿಕೊಂಡರು.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಕೇವಲ 6 ರನ್ ಗಳಿಸಿ ನಿರ್ಗಮಿಸಿದರೆ, ಶುಭ್‌ಮನ್ ಗಿಲ್ ಡಕ್ಔಟ್ ಆಗಿ ಹೊರನಡೆದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್ ಕೊಹ್ಲಿ ಕೂಡ 6 ರನ್‌ಗಳಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಆಗಮಿಸಿದ ರಿಷಬ್ ಪಂತ್ ಕೆಲಕಾಲ ಕ್ರೀಸ್ ಕಚ್ಚಿ ನಿಂತು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಸೇರಿ ತಂಡದ ಸ್ಕೋರ್ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಅವರು 39 ರನ್‌ಗಳಿಸಿ ಆಡುತ್ತಿದ್ದಾಗ ವಿಕೆಟ್ ಒಪ್ಪಿಸಿದರು. ವಿಶೇಷವೆಂದರೆ, ಈ ನಾಲ್ವರು ಬ್ಯಾಟರ್ಗಳ ವಿಕೆಟ್ ಪಡೆದಿದ್ದು ಬಾಂಗ್ಲಾದ ಯುವ ವೇಗಿ ಹಸನ್ ಮೊಹಮ್ಮದ್!.
ಯಾರು ಈ ಹಸನ್ ಮೊಹಮ್ಮದ್: 1999ರಲ್ಲಿ ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ ಹಸನ್ ಮೊಹಮ್ಮದ್ ಜನಿಸಿದ್ದರು. ಈಗ ಇವರಿಗೆ 24 ವರ್ಷ. 2020ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಮಾದರಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. 18 ಟಿ20 ಪಂದ್ಯಗಳನ್ನು ಆಡಿದ್ದು 18 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಬೌಲರ್ 22 ಏಕದಿನ ಪಂದ್ಯಗಳಲ್ಲಿ 30 ವಿಕೆಟ್ಗಳನ್ನು ಉರುಳಿಸಿ ಯಶಸ್ವಿ ಬೌಲರ್ ಎನಸಿಕೊಂಡಿದ್ದಾರೆ.
ಅಲ್ಲದೇ ಈ ವರ್ಷ ಲಂಕಾ ತಂಡದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಇವರು ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್ ಉರುಳಿಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಈ ಸರಣಿಯಲ್ಲಿ ಒಟ್ಟು 8 ವಿಕೆಟ್ಗಳನ್ನು ಪಡೆದಿದ್ದರು. ಒಂದು ಪಂದ್ಯದಲ್ಲೇ ಹಸನ್ ಐದು ವಿಕೆಟ್ ಪಡೆದಿರುವುದು ಗಮನಾರ್ಹ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023-25ರ ಭಾಗವಾಗಿ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ.
ಇದನ್ನೂ ಓದಿ: ಒಂದು ಶತಕ ಸಿಡಿಸಿ ಐದು ದಾಖಲೆ ಬರೆದ ಶ್ರೀಲಂಕಾ ಬ್ಯಾಟರ್ ಕಮಿಂದು ಮೆಂಡಿಸ್! - Lanka Batsman Wrote Five Records