ಚೆನ್ನೈ: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾವನ್ನು 149 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ಭಾರತ 227 ರನ್ಗಳ ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ಮೊದಲ ದಿನದಾಟ ಮುಕ್ತಾಯದ ವೇಳೆಗೆ 6 ವಿಕೆಟ್ ನಷ್ಟಕ್ಕೆ 339 ರನ್ಗಳನ್ನು ಕಲೆಹಾಕಿತ್ತು. ನಂತರ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ಕೇವಲ 37 ರನ್ಗಳಗೆ ನಾಲ್ಕು ವಿಕೆಟ್ ಕಳೆದುಕೊಂಡು ತನ್ನ ಇನ್ನಿಂಗ್ಸ್ ಮುಗಿಸಿತು. ರೋಹಿತ್ ಪಡೆಯನ್ನು 400ರ ಗಡಿ ದಾಟದಂತೆ ಕಟ್ಟಿ ಹಾಕಿ ಮೊದಲ ಇನ್ನಿಂಗ್ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಸ್ಕೋರ್ 40ಕ್ಕೆ ತಲುಪುವಷ್ಟರಲ್ಲೇ ಭಾರತೀಯ ಬೌಲರ್ಗಳು 4 ವಿಕೆಟ್ಗಳನ್ನು ಉರುಳಿಸಿದ್ದರು. ಟೀಂ ಇಂಡಿಯಾದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ ಬ್ಯಾಟರ್ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಆರಂಭಿಕ ಬ್ಯಾಟರ್ಗಳಾದ ಶದಮನ್ ಇಸ್ಲಾಂ 2 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರೇ, ಜಾಕಿರ್ ಹಸನ್ 3 ರನ್ಗೆ ಪೆವಿಲಿಯನ್ ಸೇರಿದರು. ಬಳಿಕ ಮೊಮಿನುಲ್, ಮುಶಫಿಕರ್ ರಹಿಮ್ (8) ಕ್ರೀಸ್ಗೆ ಒಗ್ಗಿಕೊಳ್ಳಲಾಗದೇ ಪೆವಿಲಿಯನ್ ಪರೇಡ್ ಮಾಡಿದರು. ಶಾಂಟೋ (20) ಹೊರತು ಪಡಿಸಿ ಅಗ್ರ ನಾಲ್ವರು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಈ ವೇಳೆ, ಬಾಂಗ್ಲಾ 100 ರ ಗಡಿ ತಲುಪುವುದು ಕಷ್ಟ ಎಂದು ಪರಿಗಣಿಸಲಾಗಿತ್ತು. ಆದರೆ ಶಾಕಿಬ್ ಅಲ್ ಹಸನ್ (32), ಲಿಟನ್ ದಾಸ್ (22) ತಂಡಕ್ಕೆ ಆಸರೆಯಾದರು. ಈ ಜೋಡಿ 50 ರನ್ಗಳ ಜೊತೆಯಾಟವಾಡಿತು. ಈ ಓಟಕ್ಕೆ ಜಡೇಜಾ ಬ್ರೇಕ್ ಹಾಕಿದರು.
ಈ ಜೋಡಿ ಬೇರ್ಪಟ್ಟ ನಂತರ ಬಂದ ಹಸನ್ ಮಹ್ಮೂದ್ (9), ಟಸ್ಕಿನ್ ಅಹ್ಮದ್ (11), ನಹೀದ್ ರಾಣಾ (11) ಪೆವಿಲಿಯನ್ ಪರೆಡ್ ಮಾಡಿದರು. ಮೆಹಿದಿ ಹಸನ್ ಅಜೇಯವಾಗಿ 27 ರನ್ಗಳ ಕಲೆ ಹಾಕುವ ಮೂಲಕ ತಂಡದ ಸ್ಕೋರ್ ಅನ್ನು 149ಕ್ಕೆ ಕೊಂಡೊಯ್ಯಲು ಸಹಾಯ ಮಾಡಿದರು. ಭಾರತದ ಪರ ಬುಮ್ರಾ 4, ಸಿರಾಜ್, ಆಕಾಶ್ ದೀಪ್, ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಐಪಿಎಲ್ಗೆ ವಿಕ್ರಮ್ ರಾಥೋಡ್ ರಾಯಲ್ ಎಂಟ್ರಿ: ಈ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇರ್ಪಡೆ! - Vikram Rathore