ಓವಲ್ (ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಸೋಲನುಭವಿಸಿ ಪಾಕಿಸ್ತಾನ ತಂಡ ನಿರಾಸೆ ಅನುಭವಿಸಿದೆ. ಆದರೆ, ನಾಯಕ ಬಾಬರ್ ಅಜಂ 36 ರನ್ ಗಳಿಸಿ, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ 4,000 ರನ್‌ಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬಾಬರ್ ಸ್ಥಾನ ಗಳಿಸಿದ್ದಾರೆ. ಅಲ್ಲದೇ, ನಾಯಕರಾಗಿ ಟಿ-20ಯಲ್ಲಿ 2,500 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪಾಕಿಸ್ತಾನದ 29 ವರ್ಷದ ಬಲಗೈ ಬ್ಯಾಟರ್, ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ-20 ಪಂದ್ಯಕ್ಕೂ ಮುನ್ನ 3,987 ರನ್ ಗಳಿಸಿದ್ದರು. 4,000 ರನ್‌ಗಳ ಮೈಲಿಗಲ್ಲು ಪೂರೈಸಲು ಕೇವಲ 13 ರನ್ಗಳು ಬೇಕಾಗಿತ್ತು. ಪಾಕ್ ಇನ್ನಿಂಗ್ಸ್ನ ನಾಲ್ಕನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ದಾಖಲೆ ಬರೆದರು. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ನಲ್ಲಿ 4,000 ರನ್ ಬಾರಿಸಿದ ಮೊದಲಿಗರಾಗಿದ್ದಾರೆ. ಈಗ ಕೊಹ್ಲಿ ನಂತರ ಬಾಬರ್ ಎರಡನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಟಿ-20ಯಲ್ಲಿ ಹೆಚ್ಚು ರನ್ ಗಳಿಸುವ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅವರನ್ನು ಬಾಬರ್ ಬೆನ್ನಟ್ಟಿದ್ದಾರೆ. ಸತತವಾಗಿ ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲು ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ, ಬಾಬರ್ ನಾಯಕರಾಗಿ ಟಿ-20ಯಲ್ಲಿ 2,500 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಸದ್ಯ 81 ಪಂದ್ಯಗಳನ್ನು ಮುನ್ನಡೆಸುವ ಮೂಲಕ 2,520 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಟಿ-20ಯಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ ಅತಿ ಹೆಚ್ಚು ರನ್‌ಗಳ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅವರು ಬಾಬರ್ ಮೀರಿಸಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ಬಾಬರ್ 141 ಸ್ಟ್ರೈಕ್ ರೇಟ್‌ನೊಂದಿಗೆ 660 ರನ್ ಬಾರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ಗೆ ಮುನ್ನವೇ ಆಘಾತ ಅನುಭವಿಸಿದೆ. ನಾಲ್ಕು ಪಂದ್ಯಗಳ ಟಿ-20 ಸರಣಿಯನ್ನು 2-0 ಅಂತರದಿಂದ ಸೋತಿದೆ. ಮಳೆಯಿಂದ ಮೊದಲ, ಮೂರನೇ ಪಂದ್ಯ ರದ್ದಾಗಿದ್ದರೆ, ಎರಡನೇ ಹಾಗೂ ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದು, ಸರಣಿ ವಶಪಡಿಸಿಕೊಂಡಿದೆ. ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು ಕೇವಲ 157 ರನ್ ಗಳಿಸಿತ್ತು. ಈ ಗುರಿಯನ್ನು ಆಂಗ್ಲರು 15.3 ಓವರ್‌ಗಳಲ್ಲಿ ಬೆನ್ನಟ್ಟಿ ಸರಣಿ ಗೆದ್ದರು. ಇದೀಗ ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿವೆ.
ಇದನ್ನೂ ಓದಿ: ಗೌತಮ್ ಟೀಂ ಇಂಡಿಯಾದ ಕೋಚ್ ಆದರೆ, ಯಾವ 'ಗಂಭೀರ' ಬದಲಾವಣೆ ತರಬಲ್ಲರು?