Australian Former Cricketer died: ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಪರ್ತ್ ಮೈದಾನದಲ್ಲಿ ನಡೆದಿದ್ದು, ಭಾರತ 295 ರನ್‌ಗಳ ಗೆಲುವು ಸಾಧಿಸಿದೆ. ಇದೀಗ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರೊಬ್ಬರು ಇಹಲೋಕ ತ್ಯಜಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ಇಯಾನ್ ರೆಡ್‌ಪಾತ್ (83) ನಿಧನರಾಗಿದ್ದಾರೆ. ಇಯಾನ್ 1964 ರಿಂದ 1976ರ ವರೆಗೆ ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದರು. ಆಸ್ಟ್ರೇಲಿಯಾ ಪರ ಇವರು ಒಟ್ಟು 66 ಟೆಸ್ಟ್ ಮತ್ತು ಐದು ODI ಪಂದ್ಯಗಳನ್ನು ಆಡಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಇಯಾನ್ 1964ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 97 ರನ್ ಚಚ್ಚಿದರು. ಆದರೆ 3 ರನ್ಗಳಿಂದ ಶತಕ ವಂಚಿತರಾಗಿದ್ದರು. ಅದೇ ಸಮಯದಲ್ಲಿ 1971ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ODI ಪಂದ್ಯವನ್ನು ಆಡಿದ್ದರು.
ಇಯಾನ್ ರೆಡ್‌ಪಾತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 43.45ಸರಾಸರಿಯಲ್ಲಿ 4737ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 8 ಶತಕಗಳು ಬಂದಿವೆ. ಫೆಬ್ರವರಿ 1969 ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕವನ್ನು ಸಿಡಿಸಿದ್ದರು. 1975-76 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಗಳಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದರು.
ಇದಲ್ಲದೆ, ಅವರು 5 ODI ಪಂದ್ಯಗಳಲ್ಲಿ 9.20ರ ಸರಾಸರಿಯಲ್ಲಿ 46ರನ್ ಗಳಿಸಿದರು. ಜನವರಿ 2023ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡರು. ಕಳೆದ ಏಳು ದಿನಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಶೋಕ ಆವರಿಸಿಕೊಂಡಿದೆ. ರೆಡ್ಪಾತ್ಗಿಂತಲೂ ಮೊದಲು 23 ವರ್ಷದ ಯುವ ಕ್ರಿಕೆಟಿಗ ಎಡ್ಡಿ ಡೇವ್ ಸಾವನ್ನಪ್ಪಿದ್ದರು. 2017ರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ರೊಂದಿಗೆ ಅಂತರ-ಸ್ಕ್ವಾಡ್ ಪಂದ್ಯವನ್ನು ಡಾರ್ವಿನ್‌ನಲ್ಲಿ ಅವರು ಆಡಿದ್ದರು. ಇದರಲ್ಲಿ ಡೇವ್ ಫೀಲ್ಡಿಂಗ್ ಮಾಡುವ ಅವಕಾಶವನ್ನು ಪಡೆದಿದ್ದರು.
ಇದನ್ನೂ ಓದಿ: Champions Trophy 2025: ಕೊನೆಗೂ ಹೈಬ್ರಿಡ್ ಮಾದರಿಗೆ ಒಪ್ಪಿದ ಪಾಕ್: ಆದರೆ 3 ಷರತ್ತು ವಿಧಿಸಿದ PCB!