ಮೆಲ್ಬೋರ್ನ್( ಆಸ್ಟ್ರೇಲಿಯಾ): 25ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗೆಲ್ಲುವ ವಿಶ್ವದ ನಂ 1 ಟಿನ್ನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕನಸು ಭಗ್ನವಾಗಿದೆ. ಇಂದು ರಾಡ್ ಲೇವರ್ ಅರೇನಾದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಕ್ ಅವರನ್ನು ನಾಲ್ಕನೇ ಶ್ರೇಯಾಂಕದ ಇಟಲಿಯ ಜನ್ನಿಕ್ ಸಿನ್ನರ್ ಅವರು 6-1, 6-2, 6-7, 6-3 ಅಂತರರಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.
ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜೊಕೊವಿಕ್ ಗೆಲ್ಲುವ ಭರವಸೆಯನ್ನು ಹೊಂದಿದ್ದರು. ಆದರೆ ಇಟಲಿಯ ಜನ್ನಿಕ್ ಸಿನ್ನರ್, ಜೊಕೊವಿಕ್ ಅವರನ್ನು ಮೊದಲೆರಡು ಸೆಟ್ಗಳಲ್ಲೇ ಮಣಿಸಿದರು. ನಂತರ ಮೂರನೇ ಸೆಟ್ಅನ್ನು ಬಿಟ್ಟುಕೊಟ್ಟು, ನಿರ್ಣಾಯಕ ಮತ್ತು ಅಂತಿಮ ಸೆಟ್ನಲ್ಲಿ ಗೆದ್ದು ಬೀಗಿದರು. ಈ ಮೂಲಕ ಸ್ಟಾನ್ ವಾವ್ರಿಂಕಾ, ಡೆನಿಸ್ ಇಸ್ಟೋಮಿನ್ ಮತ್ತು ಹೈಯಾನ್ ಚುಂಗ್ ನಂತರ ಮೆಲ್ಬೋರ್ನ್ನಲ್ಲಿ ಜೊಕೊವಿಕ್ ಅವರನ್ನು ಸೋಲಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಜನ್ನಿಕ್ ಸಿನ್ನರ್ ಪಾತ್ರರಾಗಿದ್ದಾರೆ.
ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಜನ್ನಿಕ್ ಸಿನ್ನರ್ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅಥವಾ ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅವರ ಎದುರು ಸೆಣಸಲಿದ್ದಾರೆ.
ಇದನ್ನೂ ಓದಿ: 2024ರಲ್ಲಿ ಕ್ರೀಡೆ: ಒಲಿಂಪಿಕ್ಸ್, ಟಿ20 ಕ್ರಿಕೆಟ್ ವಿಶ್ವಕಪ್ ಮೇಲೆ ಎಲ್ಲರ ಕಣ್ಣು
ಪ್ರಥಮ ಬಾರಿಗೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಫೈನಲ್ ಪ್ರವೇಶ: ಮತ್ತೊಂದೆಡೆ, ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ನಲ್ಲಿ ಜೆಕ್ - ಚೀನಾದ ಜಾಂಗ್ ಝಿಝೆನ್ ಮತ್ತು ಥಾಮಸ್ ಮ್ಯಾಸೆಕ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿತ್ತು. ರಾಡ್ ಲೇವರ್ ಅರೆನಾದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಇಂಡೋ - ಆಸ್ಟ್ರೇಲಿಯನ್ ಜೋಡಿ ಜಾಂಗ್ ಝಿಝೆನ್ ಮತ್ತು ಥಾಮಸ್ ಮ್ಯಾಸೆಕ್ ಅವರನ್ನು 6-3, 3-6, 7-6 (10-7) ಸೆಟ್ ಗಳಿಂದ ಸೋಲಿಸಿತ್ತು.
ಬೋಪಣ್ಣ ಮತ್ತು ಎಬ್ಡೆನ್ ಜೋಡಿಯಾಗಿ ಸತತ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದಾರೆ. ಭಾರತದ 43ರ ಹರೆಯದ ರೋಹನ್ ಬೋಪಣ್ಣ ಇದೇ ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ. ಅವರು ಈ ಹಿಂದೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ನಲ್ಲಿ ಯಾವತ್ತೂ ಮೂರನೇ ಸುತ್ತು ದಾಟಿರಲಿಲ್ಲ.