ಕೋಲ್ಕತ್ತಾ: ಭಾರತ ಮತ್ತು ಬಾಂಗ್ಲಾ ನಡುವೇ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ನಡುವೆಯೇ ಯುವ ಕ್ರಿಕೆಟಿಗರೊಬ್ಬರು ಮನೆಯಲ್ಲಿ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬಂಗಾಳದ ಕ್ರಿಕೆಟಿಗನ ಅಕಾಲಿಕ ಮರಣದಿಂದ ಕ್ರೀಡಾಲೋಕ ಶೋಕ ಸಾಗರದಲ್ಲಿ ಮುಳುಗಿದೆ.
ಉದಯೋನ್ಮುಖ ಆಟಗಾರ ಆಸಿಫ್ ಹುಸೇನ್ ಕೋಲ್ಕತ್ತಾದ ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿ ಹೆಸರು ಮಾಡಿದ್ದರು. ಆದರೆ ಅವರ ಅಕಾಲಿಕ ಮರಣವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಬಂಗಾಳದ ಯುವ ಹಾಗೂ ಪ್ರತಿಭಾವಂತ ಕ್ರಿಕೆಟಿಗ ಆಸಿಫ್ ಮನೆಯಲ್ಲಿ ಕೆಳಗೆ ಬಿದ್ದ ಕಾರಣ ತಲೆಗೆ ಬಲವಾದ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
28 ವರ್ಷದ ಕ್ರಿಕೆಟಿಗ ಬೆಂಗಾಲ್ ಪ್ರೊ ಟಿ20 ಲೀಗ್‌ನ ಪಂದ್ಯದಲ್ಲಿ 99ರನ್ ಗಳಿಸಿದ್ದರು. ಈ ವರ್ಷ ಆಸಿಫ್ ಕ್ಲಬ್ ಕ್ರಿಕೆಟ್‌ನಲ್ಲಿ ಸ್ಪೋರ್ಟಿಂಗ್ ಯೂನಿಯನ್‌ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದರು. ಆಸಿಫ್ ಅವರ ಹಠಾತ್ ನಿಧನದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ರಾಜ್ಯ ತಂಡದಲ್ಲಿ ಆಡದಿದ್ದರೂ ಆಸಿಫ್ ಕ್ಲಬ್ ಕ್ರಿಕೆಟ್‌ನಲ್ಲಿ ಚಿರಪರಿಚಿತರಾಗಿದ್ದರು. ಆಸಿಫ್ ಮನೆಯಲ್ಲಿ ಹೇಗೆ ಬಿದ್ದರು ಮತ್ತು ಅವನ ತಲೆಗೆ ಹೇಗೆ ಗಂಭೀರ ಗಾಯವಾಯಿತು ಎಂಬುದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.