ಹೈದರಾಬಾದ್: ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡ ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಆತಿಥೇಯರ ವಿರುದ್ಧ ಭಾರತ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ನವೆಂಬರ್ 22ರಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಸರಣಿ ಆರಂಭವಾಗುತ್ತದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್ನು ಕೆಲವು ವರದಿಗಳ ಪ್ರಕಾರ ಅವರು ಮೊದಲ ಎರಡು ಟೆಸ್ಟ್‌ಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ಆಡದೇ ಇರಬಹುದು ಎಂದು ಬಿಸಿಸಿಐ ಮೂಲಗಳು ಹೇಳಿವೆ. ಈ ಕುರಿತು ಬಿಸಿಸಿಐ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಯಾರು ಕ್ಯಾಪ್ಟನ್?: ರೋಹಿತ್ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿದರೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ನಾಯಕನ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಅವರು ಟೆಸ್ಟ್ ತಂಡದ ಉಪನಾಯಕ.
ಈ ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿಯನ್ನು ಮತ್ತಷ್ಟು ಸರಳಗೊಳಿಸುವ ಗುರಿ ಟೀಂ ಇಂಡಿಯಾದ್ದು. 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಸರಣಿಯನ್ನು ಟೀಂ ಇಂಡಿಯಾ ಗೆದ್ದಿತ್ತು. ಈ ಬಾರಿಯೂ ತಂಡ ಸರಣಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಸಂಕಲ್ಪದಲ್ಲಿದೆ.
ಇಲ್ಲಿಯವರೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿ 4 ಪಂದ್ಯಗಳ ಸರಣಿಯಾಗಿತ್ತು. ಆದರೆ ಈ ಬಾರಿ ಈ ಸರಣಿಗೆ ಮತ್ತೊಂದು ಪಂದ್ಯ ಸೇರ್ಪಡೆಯಾಗಿದೆ. 1991-92ರ ನಂತರ ಉಭಯ ತಂಡಗಳು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಸೋಲು: ತವರಿನಲ್ಲಿ 556 ರನ್ಗಳಿಸಿಯೂ ಹೀನಾಯವಾಗಿ ಸೋತ ಪಾಕಿಸ್ತಾನ