ನವದೆಹಲಿ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ದಾಪುಗಾಲು ಹಾಕುತ್ತಿರುವ ಯುಗ ಇದು. ಆದರೆ, ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಲಿಂಗಾನುಪಾತವನ್ನು ಎದುರಿಸುತ್ತಿದೆ. ಪ್ರಸ್ತುತ, 34 ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಕೇವಲ ಮೂವರು ಮಹಿಳಾ ನ್ಯಾಯಮೂರ್ತಿಗಳು ಇದ್ದು, ಇದು ಅಸಮಾನತೆ ಎತ್ತಿ ತೋರಿಸುತ್ತದೆ.
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವೈವಿಧ್ಯತೆ ಪ್ರಭಾವಶಾಲಿ ಸಂಸ್ಥೆಗಳ ವಿಶಿಷ್ಟ ಲಕ್ಷಣವಾಗಿದೆ. ಇದು ಮಹಿಳೆಯರನ್ನು ಒಳಗೊಳ್ಳುವುದು ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ನ್ಯಾಯಾಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಹ ಅತ್ಯಗತ್ಯವಾಗಿರಬೇಕು. ಆದಾಗ್ಯೂ, ದಿಗಂತದಲ್ಲಿ ಆಶಾವಾದ ಎಂಬುದೊಂದು ಇದ್ದು, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು 2027ರಲ್ಲಿ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗುವ ನಿರೀಕ್ಷೆಯಿದೆ.
2021ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿರುವ ನ್ಯಾ.ನಾಗರತ್ನ ಅವರು 2027ರ ಸೆಪ್ಟೆಂಬರ್ 23ರ ನಂತರ ಮೊದಲ ಮಹಿಳಾ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ. ನಾವು ಇದನ್ನು ನ್ಯಾಯಾಂಗದಲ್ಲಿ ಸಂತೋಷ ಮತ್ತು ಮಹಿಳಾ ಸಬಲೀಕರಣದ ಕ್ಷಣ ಎಂದು ನೋಡಬಹುದು. ಆದರೆ, ಅವರಿಗೆ ಹೆಚ್ಚಿನ ಕಾಲಾವಕಾಶ ಇರುವುದಿಲ್ಲ. ಏಕೆಂದರೆ, ಅವರು 2027ರ ಅಕ್ಟೋಬರ್ 29ರವರೆಗೆ ಮಾತ್ರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರವನ್ನು ಹೊಂದಿರುತ್ತಾರೆ. ಆದ್ದರಿಂದ ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಕೇವಲ ಒಂದು ತಿಂಗಳ ಅವಧಿ ಹೊಂದಬಹುದು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾತನಾಡುತ್ತಾ, ಜಿಲ್ಲಾ ನ್ಯಾಯಾಲಯಗಳಲ್ಲಿ ಲಿಂಗ ಸಮಾನತೆಯ ಗಟ್ಟಿಯಾದ ಬೇರುಗಳು ತೆಗೆದುಕೊಳ್ಳುತ್ತಿವೆ. ಒಂದು ಅಥವಾ ಎರಡು ದಶಕಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಇದೇ ರೀತಿಯ ಮಹಿಳಾ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಗುತ್ತವೆ ಎಂಬ ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.
2021ರ ಸೆಪ್ಟೆಂಬರ್‌ನಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನ್ಯಾಯಮೂರ್ತಿ ನಾಗರತ್ನ ಸಹ ಪಾಲ್ಗೊಂಡು, ಇದು ಗಾಜಿನ ಸೀಲಿಂಗ್ (ಛಾವಣಿ) ಒಡೆಯುವ ಸಮಯ ಮತ್ತು ಮಹಿಳೆಯರು ಮುಂದೆ ಹೋರಾಡುವ ಸಮಯ ಎಂದು ಹೇಳಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಿವಿ ಚಾನೆಲ್‌ವೊಂದರ ಸಂವಾದದ ವೇಳೆಯೂ ನ್ಯಾ.ನಾಗರತ್ನ ಅವರು, ಪುರುಷ ಪ್ರಾಬಲ್ಯವಿರುವ ದೇಶದ ನ್ಯಾಯಾಂಗದಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಪಾತ್ರ ನಿರ್ವಹಿಸಲು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದ್ದರು.
ಕೋರ್ಟ್ ಆದೇಶಗಳಲ್ಲಿ ನಾಗರತ್ನ ಛಾಯೆ: ಜನವರಿ 8ರಂದು ನ್ಯಾಯಮೂರ್ತಿ ನಾಗರತ್ನ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಗುಜರಾತ್ ಸರ್ಕಾರವು 11 ಅಪರಾಧಿಗಳಿಗೆ ನೀಡಿದ್ದ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ರಾಜ್ಯ ಸರ್ಕಾರವು ಹಾಗೆ ಮಾಡಲು ಯಾವುದೇ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ ಎಂದು ಚಾಟಿ ನ್ಯಾಯಪೀಠ ಬೀಸಿತ್ತು. ನ್ಯಾಯಮೂರ್ತಿ ನಾಗರತ್ನ ಅವರು ರಾಜ್ಯ ಸರ್ಕಾರದ ವಿರುದ್ಧ ಕಟುವಾದ ಟೀಕಿಸಿ, ಈ ಕೆಟ್ಟ ಕಾರ್ಯದಲ್ಲಿ ಗುಜರಾತ್ ಸರ್ಕಾರವು ಸಹಭಾಗಿಯಾಗಿದೆ. ಸತ್ಯಗಳನ್ನು ನಿಗ್ರಹಿಸುವ ಮೂಲಕ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವಲ್ಲಿ ಅಪರಾಧಿಗಳೊಂದಿಗೆ ಸೇರಿಕೊಂಡು ಈ ರೀತಿ ವರ್ತಿಸಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
2016ರ ನೋಟು ಅಮಾನ್ಯೀಕರಣದ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠ ತೀರ್ಪು ನೀಡಿದಾಗ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದರು. 2016 ರ ನೋಟು ಅಮಾನ್ಯೀಕರಣವು ಯೋಜನೆಯ ಉದಾತ್ತ ಉದ್ದೇಶಗಳ ಹೊರತಾಗಿಯೂ ಸಂಪೂರ್ಣವಾಗಿ ಕಾನೂನು ಆಧಾರದ ಮೇಲೆ ಕಾನೂನು ಬಾಹಿರವಾಗಿದೆ. ಕೇಂದ್ರ ಸರ್ಕಾರ ಬಯಸಿದಂತೆ ಎಂದು ಆರ್‌ಬಿಐ ಸಲ್ಲಿಸಿದ ದಾಖಲೆಗಳು ಈ ವಿಷಯದಲ್ಲಿ ಆರ್‌ಬಿಐನ ಸ್ವಾತಂತ್ರ್ಯದ ಕೊರತೆ ಸೂಚಿಸುತ್ತವೆ. ಈ ಅಮಾನ್ಯೀಕರಣವನ್ನು ಕೈಗೊಳ್ಳುವ ಪ್ರಸ್ತಾಪವು ಕೇಂದ್ರದಿಂದ ಹುಟ್ಟಿಕೊಂಡಿದೆಯೇ ಹೊರತು ಆರ್‌ಬಿಐನಿಂದಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.
ಮಹಿಳಾ ಪ್ರಾತಿನಿಧ್ಯದತ್ತ ಗಮನಕ್ಕೆ ಸೂಕ್ತ ಸಮಯ: ಈ ಮಹಿಳಾ ದಿನವು ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸರ್ಕಾರ ಮತ್ತು ನ್ಯಾಯಾಂಗಕ್ಕೆ ಸೂಕ್ತವಾದ ಸಮಯವಾಗಿದೆ. ಭಾರತೀಯ ನ್ಯಾಯ ವರದಿ 2022ರ ಪ್ರಕಾರ, ಉನ್ನತ ನ್ಯಾಯಾಲಯಗಳಿಗಿಂತ ಜಿಲ್ಲಾ ನ್ಯಾಯಾಲಯದ ಮಟ್ಟದಲ್ಲಿ ಹೆಚ್ಚಿನ ಮಹಿಳಾ ನ್ಯಾಯಾಧೀಶರಿದ್ದಾರೆ. ದೇಶದಾದ್ಯಂತ ಜಿಲ್ಲಾ ನ್ಯಾಯಾಲಯದ ಮಟ್ಟದಲ್ಲಿ ಒಟ್ಟು ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ.35ರಷ್ಟು ಆಗಿದ್ದರೆ, ಉಚ್ಚ ನ್ಯಾಯಾಲಯಗಳು ಇದರ ಪ್ರಮಾಣ ಕೇವಲ ಶೇ.13ರಷ್ಟು ಎಂದು ಬಹಿರಂಗ ಪಡಿಸಿದೆ.
ವಿಶ್ವಸಂಸ್ಥೆಯ ಪ್ರಕಾರ, ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯವು ನ್ಯಾಯಾಲಯಗಳು ತಮ್ಮ ನಾಗರಿಕರನ್ನು ಪ್ರತಿನಿಧಿಸುತ್ತದೆ. ಜನರ ಕಳವಳಗಳನ್ನು ಪರಿಹರಿಸುವುದು ಮತ್ತು ಉತ್ತಮ ತೀರ್ಪುಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಪ್ರಾತಿನಿಧ್ಯ ಪ್ರಮುಖವಾಗಿದೆ. ಕೇವಲ ತಮ್ಮ ಉಪಸ್ಥಿತಿಯಿಂದ ಮಹಿಳಾ ನ್ಯಾಯಾಧೀಶರು ನ್ಯಾಯಾಲಯಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸುತ್ತಾರೆ. ನ್ಯಾಯವನ್ನು ಆಶ್ರಯಿಸುವವರಿಗೆ ತಾವು ಕೂಡ ನ್ಯಾಯಾಂಗವನ್ನು ಪ್ರವೇಶಿಸಬಹುದು ಎಂಬ ಪ್ರಬಲ ಸಂಕೇತವನ್ನು ರವಾನಿಸುತ್ತಾರೆ.
ಇದನ್ನು ಓದಿ:ಕಾನೂನು ಸಂಘರ್ಷದಲ್ಲಿ 'ಮಧ್ಯಸ್ಥಿಕೆ ಕಾಯಿದೆ'ಯ ಪಾತ್ರವೇನು?