ರಾಜಕೀಯ ವಿಶ್ಲೇಷಕರ ಊಹೆಯಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಭಾರತದ ಕುರಿತಾಗಿ ತಮ್ಮ ಕಾರ್ಯವಿಧಾನದಲ್ಲಿ ಮೃದುತ್ವ ಪ್ರದರ್ಶಿಸುತ್ತಿದ್ದಾರೆ. ಇತ್ತೀಚಿಗೆ ಸ್ಥಳೀಯ ವಾಹಿನಿಗೆ ನೀಡಿದ ಮೊದಲ ಸಂದರ್ಶನದಲ್ಲಿ, ದ್ವೀಪ ರಾಷ್ಟ್ರಕ್ಕೆ ಭಾರತ ನೀಡಿದ ಸಾಲವನ್ನು ಮರುಪಾವತಿಸುವ ವಿಷಯವಾಗಿ ಮೃದು ಧೋರಣೆ ತಳೆಯುವಂತೆ ಭಾರತಕ್ಕೆ ಅವರು ಮನವಿ ಮಾಡಿದ್ದಾರೆ. ವರ್ಷಾಂತ್ಯದ ವೇಳೆಗೆ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಮರುಪಾವತಿಸಲು 400.9 ಮಿಲಿಯನ್ ಡಾಲರ್ ಬಾಕಿಯಿದೆ. ಕೇವಲ 6.190 ಶತಕೋಟಿ ಡಾಲರ್ GDP ಹೊಂದಿರುವ ದೇಶಕ್ಕೆ ಪಾವತಿಸಲು ಇದು ತುಂಬಾ ಕಷ್ಟಕರವಾಗಿದೆ. ಮಾಲ್ಡೀವ್ಸ್ ಈಗಾಗಲೇ 3.577 ಬಿಲಿಯನ್ ಡಾಲರ್ನ ಒಟ್ಟು ಬಾಹ್ಯ ಸಾಲದ ಅಡಿಯಲ್ಲಿ ತತ್ತರಿಸುತ್ತಿದೆ. ಇದರಲ್ಲಿ ಶೇಕಡಾ 42ಕ್ಕಿಂತ ಹೆಚ್ಚು ಚೀನಾಗೆ ಸಂಬಂಧಿಸಿದೆ.
ಭಾರತಕ್ಕೆ ಮಾಲ್ಡೀವ್ಸ್ ನೀಡಬೇಕಾದ ಸಾಲ 517 ಮಿಲಿಯನ್ ಡಾಲರ್: ಮಾಲ್ಡೀವ್ಸ್ ಒಟ್ಟು 517 ಮಿಲಿಯನ್ ಡಾಲರ್ ಸಾಲವನ್ನು ಭಾರತಕ್ಕೆ ಪಾವತಿಸಬೇಕಿದೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತವು ಮಾಲ್ಡೀವ್ಸ್‌ನಲ್ಲಿನ ಅಭಿವೃದ್ಧಿ ಯೋಜನೆಗಳಿಗಾಗಿ 93 ಮಿಲಿಯನ್ ಡಾಲರ್ ಖರ್ಚು ಮಾಡಿದೆ. ಮಾಲ್ಡೀವ್ಸ್ ಬಜೆಟ್ ಅಂಕಿಅಂಶಗಳಿಗಿಂತ ಇದು ದ್ವಿಗುಣವಾಗಿದೆ. ಈ ನಡುವೆಯೇ ಭಾರತದ ವಿರುದ್ಧ ಮುಯಿಝು ವಾಗ್ದಾಳಿ ನಡೆಸಿದ್ದರು.
ಕಷ್ಟದ ಸಮಯದಲ್ಲಿ ಭಾರತ ಯಾವಾಗಲೂ ಮಾಲ್ಡೀವ್ಸ್‌ನ ಬೆಂಬಲಕ್ಕೆ ನಿಂತಿದೆ. ನವೆಂಬರ್, 1988ರಲ್ಲಿ ದೇಶವು ದಂಗೆಯ ಪ್ರಯತ್ನ ಎದುರಿಸಿದಾಗ ಭಾರತ ಮಾತ್ರ ತನ್ನ ಸೇನೆಯನ್ನು ಮಾಲ್ಡೀವ್ಸ್‌ಗೆ ಕಳುಹಿಸಿತ್ತು. 1980 ಮತ್ತು 90ರ ದಶಕಗಳಲ್ಲಿ, ಭಾರತವು ಮಾಲ್ಡೀವ್ಸ್‌ಗೆ 200 ಹಾಸಿಗೆಗಳ ಆಸ್ಪತ್ರೆ ಮತ್ತು ಪಾಲಿಟೆಕ್ನಿಕ್ ಕಾಲೇಜನ್ನು ಉಡುಗೊರೆಯಾಗಿ ನೀಡಿತ್ತು. 2004ರಲ್ಲಿ ಮಾಲ್ಡೀವ್ಸ್‌ಗೆ ಸುನಾಮಿ ಅಪ್ಪಳಿಸಿದಾಗ ಭಾರತ ಎಲ್ಲರಿಗಿಂತ ಮೊದಲು ಪ್ರತಿಕ್ರಿಯಿಸಿತ್ತು.
2008ರಿಂದ 500 ಕೈಗೆಟುಕುವ ಮನೆಗಳ ನಿರ್ಮಾಣ, ತಂತ್ರಜ್ಞಾನ ದತ್ತು ಕೇಂದ್ರ, ಪೊಲೀಸ್ ಮತ್ತು ಕಾನೂನು ಜಾರಿಗಳ ರಾಷ್ಟ್ರೀಯ ಕಾಲೇಜು, ಮಾಲೆಯಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆ ಸೇರಿದಂತೆ ಮಾಲ್ಡೀವ್ಸ್‌ಗೆ ಸಹಾಯಕ್ಕಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಭಾರತ 2454.59 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ. ಅಡ್ಡು ಅಟೋಲ್‌ನಲ್ಲಿ ರಸ್ತೆ ಮತ್ತು ಭೂ ಸುಧಾರಣಾ ಯೋಜನೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಯ 20,000ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡುವುದರ ಜತೆಗೆ ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಾಯಹಸ್ತ ಚಾಚಿತ್ತು. ನಮ್ಮ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಕಾಲಕಾಲಕ್ಕೆ ವಿವಿಧ ಜಂಟಿ ವ್ಯಾಯಾಮಗಳಲ್ಲಿ MNDF ಜತೆಗೆ ತೊಡಗಿಸಿಕೊಂಡಿದೆ.
ಮಾರ್ಚ್ 22ರಂದು ಸ್ಥಳೀಯ ದಿನಪತ್ರಿಕೆ "ಮಿಹಾರು" ಜೊತೆಗೆ ಮಾತನಾಡಿದ ಮುಯಿಝು ಅವರು, ''ಮಾಲ್ಡೀವ್ಸ್‌ಗೆ ನೆರವು ನೀಡುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ. ಮಾಲ್ಡೀವ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಭಾರತವು ಸಾಲ ಮರುಪಾವತಿಯಲ್ಲಿ ಋಣಭಾರ ಪರಿಹಾರ ಕ್ರಮಗಳನ್ನು ಸುಲಭಗೊಳಿಸುತ್ತದೆ" ಎಂಬ ಭರವಸೆ ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ಅಬುಧಾಬಿಯಲ್ಲಿ COP ಸಮ್ಮೇಳನದಲ್ಲಿ ಮುಯಿಝು, ಭಾರತದ ಕೊಡುಗೆಗಾಗಿ ಭಾರತದ ಪ್ರಧಾನಮಂತ್ರಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಲು ಬಯಸುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಆದರೆ, ಈ ಯೋಜನೆಗಳನ್ನು ಬಲಪಡಿಸಲು ಮತ್ತು ತ್ವರಿತಗೊಳಿಸಲು ಪ್ರಧಾನಿ ಮೋದಿಯವರನ್ನು ವಿನಂತಿಸಿದರು. ತನ್ನ ದೇಶದಿಂದ ರಕ್ಷಣಾ ಸಿಬ್ಬಂದಿಯ ಸಣ್ಣ ತುಕಡಿಯನ್ನು ತೆಗೆದುಹಾಕುವ ವಿವಾದಾತ್ಮಕ ವಿಷಯದ ಬಗ್ಗೆ, ಮುಯಿಝು ಈ ನೀತಿಯು ಭಾರತ-ಕೇಂದ್ರಿತವಾಗಿಲ್ಲ. ಆದರೆ ಇದು ಎಲ್ಲಾ ವಿದೇಶಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ ಎಂದು ಹೇಳುವ ಮೂಲಕ ತನ್ನ ನಿಲುವನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ.
ಯೂ ಟರ್ನ್ ಹೊಡೆದ ಮುಯಿಝು: ಈಗ ಮುಯಿಝು ಅವರು ಭಾರತದ ಕುರಿತಂತೆ ಯೂ ಟರ್ನ್ ಮಾಡಲು ಏಕೆ ಪ್ರಯತ್ನಿಸುತ್ತಿದ್ದಾರೆ. ಈ ಇದರ ಹಿಂದೆ ನಾಲ್ಕು ಪ್ರಬಲ ಕಾರಣಗಳಿರಬಹುದು. ಮೊದಲನೆಯದಾಗಿ, ಸಣ್ಣ ಆರ್ಥಿಕತೆ ಹೊಂದಿರುವ ಮಾಲ್ಡೀವ್ಸ್ ಒಂಬತ್ತು ತಿಂಗಳ ಅವಧಿಯಲ್ಲಿ 400 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಮರುಪಾವತಿ ಮಾಡುವುದು ದೊಡ್ಡ ಹೊರೆಯಾಗಿದೆ. ಎರಡನೆಯದಾಗಿ, ಚೀನಾ 20 ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು ಬೀಜಿಂಗ್‌ಗೆ ಮುಯಿಝು ಅವರ ಭೇಟಿಯ ಸಮಯದಲ್ಲಿ, ಚೀನಾವು 130 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿತ್ತು. ಮುಂದಿನ ದಿನಗಳಲ್ಲಿ ಮಾಲ್ಡೀವ್ಸ್‌ಗೆ ಚೀನಾ ಹೆಚ್ಚವರಿ ಹಣವನ್ನು ಕಳುಹಿಸಿಕೊಡುವಂತಹ ಮನಸ್ಥಿತಿಯಲ್ಲಿಲ್ಲ ಎನ್ನುವಂತೆ ತೋರುತ್ತದೆ. ಜತೆಗೆ ಚೀನಾ ದೇಶದ ಸಾಲಗಳನ್ನು ಸಂದರ್ಭದಲ್ಲಿ, ನಿಜವಾದ ಸಾಲದ ಮೊತ್ತವು ಸಾರ್ವಜನಿಕ ಡೊಮೇನ್‌ನಲ್ಲಿ ತೋರಿಸುವುದಕ್ಕಿಂತ ಹೆಚ್ಚಿನದಾಗಿರುತ್ತದೆ ಎಂಬುದನ್ನು ಮರೆಯಬಾರದು.
ಮೂರನೆಯದಾಗಿ, IMF ತನ್ನ ಅನಿಶ್ಚಿತ ಆರ್ಥಿಕ ಸ್ಥಿತಿಯ ವಿರುದ್ಧ ದ್ವೀಪ ರಾಷ್ಟ್ರಕ್ಕೆ ನೀಡಿದ ಇತ್ತೀಚಿನ ಎಚ್ಚರಿಕೆಯಿಂದ ಮುಯಿಝು ಅವರು, ಭಾರತಕ್ಕೆ ಮೃದು ಧೋರಣೆ ತಾಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೊನೆಯ ವಿಚಾರವನ್ನು ಗಮನಿಸುವುದಾದರೆ, ಪ್ರತಿಪಕ್ಷಗಳು ಮುಯಿಝು ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಯಲು ಒತ್ತಾಯಿಸುತ್ತಲೇ ಬರುತ್ತಿವೆ. ಭಾರತದೊಂದಿಗೆ ವ್ಯವಹರಿಸುವಾಗ ಅಧ್ಯಕ್ಷರು 'ಮೊಂಡುತನ' ಪ್ರದರ್ಶನ ಮಾಡಬಾರದು ಎಂದು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮದ್ ಸೋಲಿಹ್ ಸಲಹೆ ನೀಡಿದ್ದರು. ಆದರೆ, ಮುಯಿಝು ತನ್ನ ಉತ್ತರದ ನೆರೆಹೊರೆಯವರೊಂದಿಗೆ ತನ್ನ ದೇಶದ ಪ್ರಯೋಜನಕ್ಕಾಗಿ ಹೇಗೆ ಪ್ರಾಯೋಗಿಕ ಮತ್ತು ತರ್ಕಬದ್ಧ ವಿಧಾನವನ್ನು ಅನುಸರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.