ಎರಡನೆಯ ಮಹಾಯುದ್ಧದ ನಂತರ ಬ್ರಿಟಿಷರ ಸಾಮ್ರಾಜ್ಯಶಾಹಿ ಸರಪಳಿಯನ್ನು ಕಳಚಿಕೊಂಡು ಸ್ವತಂತ್ರವಾದ ಅನೇಕ ದೇಶಗಳಲ್ಲಿ ಭಾರತವೂ ಒಂದಾಗಿದೆ. 2024ರ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿತು. ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ಅಮೃತಗಳಿಗೆಯಲ್ಲಿದೆ. ವಸಾಹತುಶಾಹಿ ದುರಾಡಳಿತಕ್ಕೆ ತುತ್ತಾಗಿ ಬಡರಾಷ್ಟ್ರವಾಗಿದ್ದ ದೇಶ, ಈಗ ರಾಜಕೀಯ, ಆರ್ಥಿಕವಾಗಿ ಜಾಗತಿಕ ಶಕ್ತಿಯಾಗಿ ಬೆಳೆದಿದೆ.
1947ರಲ್ಲಿ ಭಾರತದ ಜೊತೆಗೆ ಪಾಕಿಸ್ತಾನವೂ ಸ್ವಾತಂತ್ರ್ಯ ಪಡೆಯಿತು. ಶ್ರೀಲಂಕಾ ಮತ್ತು ಮ್ಯಾನ್ಮಾರ್ 1948ರಲ್ಲಿ, 1949ರಲ್ಲಿ ಚೀನಾ, 1965ರಲ್ಲಿ ಮಾಲ್ಡೀವ್ಸ್, 1971ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದುಕೊಂಡಿವೆ. ಏಷ್ಯಾದ ನೆರೆರಾಷ್ಟ್ರವಾದ ಜಪಾನ್ ವಸಾಹತುಶಾಹಿ ಆಡಳಿತಕ್ಕೆ ಒಳಗಾಗಿಲ್ಲದ ಕಾರಣ, ಅದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ. ಏಷ್ಯಾದ ರಾಷ್ಟ್ರಗಳಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಭಾರತವು ಬಹು ಎತ್ತರಕ್ಕೆ ಬೆಳೆದುನಿಂತಿದೆ. ಸ್ವಾತಂತ್ರ್ಯ ಬಂದು 78 ವರ್ಷವಾದ್ದರಿಂದ ನಾವೀಗ ಉಳಿದ ರಾಷ್ಟ್ರಗಳಿಗಿಂತ ಎಷ್ಟು ಭಿನ್ನ ಎಂಬುದನ್ನು ವಿಶ್ಲೇಷಿಸಬೇಕಿದೆ.
ಭಾರತದ ಬೆಳವಣಿಗೆಯ ಯಶೋಗಾಥೆ: ಭಾರತವು ಸುಮಾರು 2 ಶತಮಾನಗಳ ಕಾಲ ವಸಾಹತುಶಾಹಿ ಆಳ್ವಿಕೆ ಮತ್ತು ಶೋಷಣೆಗೆ ಒಳಗಾಗಿತ್ತು. ಅತಿ ಸಿರಿವಂತ ರಾಷ್ಟ್ರವಾಗಿದ್ದ ಭಾರತ ದಾಸ್ಯಕ್ಕೆ ತುತ್ತಾಗಿ ಬಡವಾಯಿತು. ಪ್ರಸಿದ್ಧ ಕೇಂಬ್ರಿಡ್ಜ್ ಇತಿಹಾಸಕಾರ ಆಂಗಸ್ ಮ್ಯಾಡಿಸನ್ ಅವರು ಬರೆದಿರುವಂತೆ 1700ನೇ ಇಸವಿಯಲ್ಲಿ ವಿಶ್ವದ ಆದಾಯದಲ್ಲಿ ಭಾರತದ ಪಾಲು ಶೇಕಡಾ 22.6ರಷ್ಟಿತ್ತು. ಇಡೀ ಯುರೋಪ್ನ ಪಾಲು ಶೇಕಡಾ 23.3ರಷ್ಟಿತ್ತು. ಅಂದರೆ, ಒಂದು ದೇಶ ಒಂದು ಖಂಡಕ್ಕೆ ಸಮಾನವಾಗಿತ್ತು. ಅಷ್ಟು ಸಂಪದ್ಭರಿತವಾಗಿತ್ತು ನಮ್ಮ ದೇಶ.
ವಸಾಹತುಶಾಹಿಗೆ ತುತ್ತಾಗಿ ಬಡವಾದ ದೇಶ 1952ರಲ್ಲಿ ಆ ಪಾಲು ಶೇಕಡಾ 3.8ಕ್ಕೆ ಇಳಿಯಿತು. ಇದು ದೇಶವನ್ನು ವಸಾಹತುಶಾಹಿಗಳು ಲೂಟಿ ಮಾಡಿದ ಪ್ರಮಾಣವನ್ನು ಸೂಚಿಸುತ್ತದೆ. ಸ್ವಾತಂತ್ರ್ಯದ 78 ವರ್ಷಗಳ ನಂತರ ಭಾರತ ಮತ್ತೆ ಪುಟಿದೆದ್ದು 3.7 ಅಮೆರಿಕನ್ ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದಲ್ಲಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ.
ಮೊದಮೊದಲು ಸಮಾಜವಾದಿ ನೀತಿಗಳು ಉತ್ತಮ ಫಲಿತಾಂಶ ನೀಡಿದರೆ, ಬಳಿಕ ಹಿಂಜರಿತಕ್ಕೆ ಒಳಗಾಗಿ ಆರ್ಥಿಕ ಶಿಸ್ತಿಗೆ ಒಳಪಟ್ಟಿತು. ಒಂದು ಹಂತದಲ್ಲಿ ಕೈಗಾರಿಕೆ, ಖಾಸಗಿ ಉದ್ಯಮ ಕುಂಠಿತಗೊಂಡು ಆರ್ಥಿಕ ಕುಸಿತದ ಅಂಚಿಗೆ ಬಂದಿತು. ಬಳಿಕ ಸುಧಾರಣಾ ಮಾರ್ಗ ಹಿಡಿದು 1991ರಲ್ಲಿ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣವನ್ನು ಹೊಂದುವ ಮೂಲಕ ಮತ್ತೆ ಆರ್ಥಿಕ ಸದೃಢತೆ ಸಾಧಿಸಿತು.
ಭಾರತವು ಪಾಕಿಸ್ತಾನದೊಂದಿಗೆ ಮೂರು ಮತ್ತು ಚೀನಾದೊಂದಿಗೆ ನಾಲ್ಕು ಯುದ್ಧಗಳನ್ನು ನಡೆಸಿದೆ. ಆದಾಗ್ಯೂ ಆರ್ಥಿಕ ಉತ್ಕೃಷ್ಟತೆ ಬಲವಾಗಿದೆ. ಈಗ 1.45 ಮಿಲಿಯನ್ ಮಿಲಿಟರಿ ಸಿಬ್ಬಂದಿಯೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಸೈನ್ಯ ನಮ್ಮ ಭಾರತದ್ದು ಎಂಬುದು ಹೆಮ್ಮೆಯ ಸಂಗತಿ.
ಏಷ್ಯಾದ ರಾಷ್ಟ್ರಗಳ ಸ್ಥಿತಿಗತಿ ಹೇಗಿದೆ?: ಚೀನಾ, ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್ ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್ಗಳಿಗೆ ಭಾರತ ಹೋಲಿಸಿದಲ್ಲಿ ಚೀನಾ ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಚೀನಾ ಮಾತ್ರ ಆರ್ಥಿಕ, ಮಿಲಿಟರಿ ಮತ್ತು ತಾಂತ್ರಿಕ ಶಕ್ತಿಯಿಂದ ಭಾರತದೊಂದಿಗೆ ಕಠಿಣ ಸವಾಲು ಒಡ್ಡಿದೆ. ಎರಡೂ ದೈತ್ಯ ರಾಷ್ಟ್ರಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಏಕಪಕ್ಷೀಯ, ದಮನಕಾರಿ ಆಡಳಿತದಿಂದ ಚೀನಾ ಯಶಸ್ಸು ಸಾಧಿಸಿದ್ದರೆ, ಭಾರತವು ಬಹು-ಪಕ್ಷ, ಸಂಸದೀಯ ಪ್ರಜಾಪ್ರಭುತ್ವದ ತತ್ವಗಳು ಮತ್ತು ಒಮ್ಮತದ ಆಧಾರದ ಮೇಲೆ ಯಶಸ್ಸು ಪಡೆದಿದೆ. ಹೀಗಾಗಿ, ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.
ಭಾರತದಿಂದ ಇಬ್ಭಾಗವಾಗಿರುವ ಪಾಕಿಸ್ತಾನ ಧಾರ್ಮಿಕ ಮೂಲಭೂತವಾದದ ಕಡೆಗೆ ವಾಲಿ, ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಆರ್ಥಿಕ ಮತ್ತು ರಾಜಕೀಯವಾಗಿ ಜರ್ಝರಿತವಾಗಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಅಶಾಂತಿಯಿಂದ ಶ್ರೀಲಂಕಾದಲ್ಲಿ ಅಧ್ಯಕ್ಷರ ವಿರುದ್ಧವೇ ದಂಗೆಯಾಗಿದೆ. ಪಾಕಿಸ್ತಾನದ ಬೇರ್ಪಟ್ಟ ಬಾಂಗ್ಲಾದೇಶ ತನ್ನ ಮಾಜಿ ಪ್ರಧಾನಿ ಶೇಕ್ ಹಸೀನಾ ವಿರುದ್ಧ ಹಿಂಸಾತ್ಮಕ ದಂಗೆ ನಡೆಸಿ, ರಾಜಕೀಯ ಅನಿಶ್ಚಿತತೆಗೆ ಒಳಗಾಗಿದೆ.
ಇತ್ತ, ಮ್ಯಾನ್ಮಾರ್ ರಾಜಕೀಯ ಸಂಘರ್ಷದಿಂದ ಒದ್ದಾಡುತ್ತಿದೆ. ಕಳೆದ ಆರು ತಿಂಗಳಲ್ಲಿ 3 ದಶಲಕ್ಷಕ್ಕೂ ಹೆಚ್ಚು ಜನರು ವಲಸೆ ಹೋಗಿದ್ದಾರೆ. ಇದು ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ತಳ್ಳಿದೆ. ದ್ವೀಪರಾಷ್ಟ್ರ ಮಾಲ್ಡೀವ್ಸ್ ಸ್ಥಿತಿಯೂ ಹೀಗೆಯೇ ಇದೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದಲ್ಲಿ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದು, ಚೀನಾ ಮತ್ತು ಭಾರತದ ನೆರವಿನಿಂದ ದಿನದೂಡುತ್ತಿದೆ.
ಈ ಎಲ್ಲಾ ದೇಶಗಳ ಸ್ಥಿತಿಗತಿಯನ್ನು ಗಮನಿಸಿದಲ್ಲಿ ಭಾರತವು ಬೆಳೆದುನಿಂತ ಬಗೆಯೇ ಅದ್ಭುತ. ಸಾಮ್ರಾಜ್ಯಶಾಹಿ ಆಳ್ವಿಕೆಯಿಂದ ಮುಕ್ತವಾಗಿ, ವಿದೇಶಿ ಒತ್ತಡಗಳಿಗೆ ಮಣಿಯದೆ ಕಠಿಣ ಸವಾಲುಗಳನ್ನು ಕೆಚ್ಚೆದೆಯಿಂದ ಎದುರಿಸಿದೆ. ಗಮನಾರ್ಹ ಆರ್ಥಿಕ ಬೆಳವಣಿಗೆಯಿಂದ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆಯುವ ಮೂಲಕ ಶ್ರೇಷ್ಠ ಉದಾಹರಣೆಯಾಗಿ ನಿಂತಿದೆ. ಜೊತೆಗೆ 'ವಿಕಸಿತ ಭಾರತ'ದತ್ತ ಸಾಗುತ್ತಿದೆ.
ಸಿಂಗಾಪುರ, ದಕ್ಷಿಣ ಕೊರಿಯಾದ್ದು ಬೇರೆಯದ್ದೇ ಲೆಕ್ಕ: 1948ರಲ್ಲಿ ದಕ್ಷಿಣ ಕೊರಿಯಾ, 1965ರಲ್ಲಿ ಸ್ವತಂತ್ರವಾದ ಸಿಂಗಾಪುರವು ಆರ್ಥಿಕವಾಗಿ ಬೆಳೆದುಬಂದ ರೀತಿ ಅಚ್ಚರಿ ಮತ್ತು ಅನುಕರಣೀಯ. ಚಿಕ್ಕ ರಾಷ್ಟ್ರವಾದ ಸಿಂಗಾಪುರ ಇಂದು ಜಿಡಿಪಿಯಲ್ಲಿ ವಿಶ್ವದಲ್ಲೇ ಅತ್ಯಧಿಕವಾಗಿದೆ. ಸ್ವಾತಂತ್ರ್ಯಕ್ಕೂ ಮುನ್ನ ಆಫ್ರಿಕಾದಂತೆ ಕಡುಬಡತನ ಕಂಡಿದ್ದ ದೇಶ ಅಲ್ಪಾವಧಿಯಲ್ಲಿ ಸಿರಿವಂತಿಕೆ ಗಳಿಸಿತು. ಜಪಾನ್ನ ಹಿಡಿತದಿಂದ ಬಿಡಿಸಿಕೊಂಡ ದಕ್ಷಿಣ ಕೊರಿಯಾ ಕೂಡ ಅಷ್ಟೇ ವೇಗವಾಗಿ ಬೆಳೆದಿರುವುದು ಅಧ್ಯಯನಯೋಗ್ಯ ವಿಷಯವಾಗಿದೆ.
(ಲೇಖಕ ಮಹೇಂದ್ರ ಬಾಬು ಕುರುವ ಅವರು, ಉತ್ತರಾಖಂಡದ ಶ್ರೀನಗರ ಗಡ್ವಾಲ್ನ ಎಚ್‌ಎನ್‌ಬಿ ಗರ್ವಾಲ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿದ್ದಾರೆ)
(ಗಮನಿಸಿ: ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಬರಹಗಾರರ ಸ್ವತಃ ಅಭಿಪ್ರಾಯಗಳು. ಇಲ್ಲಿ ಉಲ್ಲೇಖಿಸಲಾದ ಯಾವುದೇ ಸಂಗತಿಗಳು ಮತ್ತು ಅಭಿಪ್ರಾಯಗಳು ಈಟಿವಿ ಭಾರತ್ನ ಅಭಿಪ್ರಾಯಗಳಾಗಿರುವುದಿಲ್ಲ)