ಹೈದರಾಬಾದ್: 2024ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ವಿಜೇತರ ಹೆಸರು ಘೋಷಣೆಯಾಗಿದ್ದು, ಈ ಕಿರೀಟ ನಿಖಿತಾ ಪೊರ್ವಾಲಾ ಮುಡಿಗೇರಿದೆ. ಅಕ್ಟೋಬರ್ 16ರ ಬುಧವಾರ ರಾತ್ರಿ 2024ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2024ರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕಳೆದ ಬಾರಿಯ ಮಿಸ್ ಇಂಡಿಯಾ ವರ್ಲ್ಡ್ ವಿಜೇತರಾಗಿದ್ದ ನಂದಿನಿ ಗುಪ್ತಾ ಅವರು, ನಿಖಿತಾಗೆ ಕಿರೀಟ ಮುಡಿಗೇರಿಸಿದರು. ಈ ವೇಳೆ ನಟಿ ನೇಹಾ ದೂಪಿಯಾ ಕೂಡ ಜೊತೆಗಿದ್ದರು.
ಇನ್ನು, ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ನ ಮೊದಲ ರನ್ರ್ ಅಪ್ ಆಗಿ ಕೇಂದ್ರಾಡಳಿತ ಪ್ರದೇಶದ ರೇಖಾ ಪಾಂಡೆಯಾಗಿದ್ದು, ಎರಡನೇ ರನ್ರ್ ಅಪ್ ಗುಜರಾತ್ನ ಆಯುಷಿ ದೋಲಕಿಯಾ ಆಗಿದ್ದಾರೆ.
ಬುಧವಾರ ಮುಂಬೈನಲ್ಲಿ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಮಾಜಿ ಮಿಸ್ ಇಂಡಿಯಾ ಸಂಗೀತಾ ಬಿಜ್ಲಾನಿ ಅದ್ಭುತ ಪ್ರದರ್ಶನ ನೀಡಿ, ಪ್ರೇಕ್ಷಕರ ಮನಗೆದ್ದರು. ಕಾರ್ಯಕ್ರಮದಲ್ಲಿ ನೃತ್ಯಪಟು ರಾಘವ್ ಜುಯಲ್ ಸೇರಿದಂತೆ ಅನೇಕ ಸೆಲಿಬ್ರಿಟಿಗಳು ಹಾಜರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಅನುಶಾ ದಂಡೇಕರ್ ಭಾಗಿಯಾಗಿದ್ದರು.
ಪ್ರಾದೇಶಿಕ ವಿಜೇತರ ಪಟ್ಟಿ:
- ಫೆಮಿನಾ ಮಿಸ್ ಇಂಡಿಯಾ ನಾರ್ತ್ ಈಸ್ಟ್ 2024- ಏಂಜೆಲಿಯಾ ಅನ್ನಾ ಮಾರ್ವೆನ್
- ಫೆಮಿನಾ ಮಿಸ್ ಇಂಡಿಯಾ ಈಸ್ಟ್ 2024- ರಿಯಾ ನಂದಿನಿ
- ಫೆಮಿನಾ ಮಿಸ್ ಇಂಡಿಯಾ ಸೌತ್ 2024 ಮಲಿನಾ
- ಫೆಮಿನಾ ಮಿಸ್ ಇಂಡಿಯಾ ವೆಸ್ಟ್ 2024- ಅರ್ಷಿಯಾ ರಶೀದ್
- ಫೆಮಿನಾ ಮಿಸ್ ಇಂಡಿಯಾ ನಾರ್ಥ್ 2024- ಸಿಫ್ಟಿ ಸಿಂಗ್ ಸಾರಂಗ್
ಯಾರಿದು ನಿಖಿತಾ ಪೊರ್ವಾಲಾ: ಮಧ್ಯಪ್ರದೇಶದ ಬೆಡಗಿ ನಿಖಿತಾ ಪೊರ್ವಾಲಾ ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2024ರ ವಿಜೇತರಾಗಿದ್ದಾರೆ. ಉಜ್ಜೈಯಿನಿ ನಗರದ ಇವರು ಪೆಟ್ರೋಕೆಮಿಕಲ್ ಉದ್ಯಮಿ ಅಶೋಕ್ ಪೊರ್ವಾಲಾ ಅವರ ಪುತ್ರಿ. ಪದವಿಯನ್ನು ಪೂರ್ಣಗೊಳಿಸಿರುವ ಇವರು ನಾಟಕದಲ್ಲೂ ಕೂಡ ಪದವಿಯನ್ನು ಗಳಿಸಿದ್ದಾರೆ.
18ನೇ ವಯಸ್ಸಿಗೆ ಬಣ್ಣದ ಬದುಕಿನ ಪ್ರಯಾಣ ಆರಂಭಿಸಿದ ನಿಖಿತಾ, ಅನೇಕ ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಉತ್ತಮ ಕಥೆಗಾರ್ತಿಯಾಗಿರುವ ನಿಖಿತಾ, 60 ನಿಮಿಷದ ನಾಟಕವೊಂದರಲ್ಲಿ ನಟಿಸಿದ್ದಾರೆ. ಕೃಷ್ಣಾ ಲೀಲಾ ಎಂಬ 250 ಪುಟದ ನಾಟಕವನ್ನು ಸಹ ಬರೆದಿದ್ದಾರೆ.
ನಿಖಿತಾ ಚಿತ್ರಗಳು: ಅನೇಕ ಫೀಚರ್ ಫಿಲ್ಮನ ಭಾಗವಾಗಿರುವ ನಿಖಿತಾ ಅವರ ಚಿತ್ರಗಳು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಸಾರವಾಗಿದ್ದು, ಶೀಘ್ರದಲ್ಲಿಯೇ ಬಿಡುಗಡೆಗೆ ಸಜ್ಜಾಗಿವೆ. ಇತ್ತೀಚೆಗೆ ಇವರು ಅಭಿನಯಿಸಿದ ಸಿನಿಮಾದ ಟ್ರೈಲರ್ ಅನ್ನು ಕೂಡ ನಿಖಿತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಮಿಸ್ ವರ್ಲ್ಡ್ ಸ್ಪರ್ಧೆ ಕುರಿತು: ಮಿಸ್ ಇಂಡಿಯಾ ಸ್ಪರ್ಧೆ ಪ್ರತಿಷ್ಠಿತ ಸ್ಪರ್ಧೆಯಾಗಿದೆ. ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯನ್ನು ಇಲ್ಲಿ ಮಾನದಂಡವಾಗಿರಿಸಲಾಗಿದೆ. ಈ ಪ್ರಶಸ್ತಿಯನ್ನು ಈವರೆಗೆ ಗೆದ್ದ ಭಾರತೀಯರು 1999ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೈಡೆನ್, 1999ರಲ್ಲಿ ಯುಕ್ತಾ ಮುಖಿ, 2000ರಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಚಿಲ್ಲರ್ ಪಡೆದಿದ್ದರು.
ಇದನ್ನೂ ಓದಿ: ವೃತ್ತಿಯಲ್ಲಿ ವೈದ್ಯರಾದರೂ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ ಚೆಲುವೆಯರು!