Foreigners Most Searched Places In India: ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಿದೇಶಿಗರ ನೆಚ್ಚಿನ ಪ್ರಸಿದ್ಧ ಸ್ಥಳಗಳು ಯಾವುವು? ಅವು ಯಾವ ರಾಜ್ಯದಲ್ಲಿವೆ ಎಂಬುದನ್ನು ನೋಡೋಣ.
- ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿರುವ ಕುತುಬ್ ಮಿನಾರ್, ರೆಡ್ ಫೋರ್ಟ್, ಇಂಡಿಯಾ ಗೇಟ್, ಹುಮಾಯೂನ್ ಗೋರಿಗಳಂತಹ ಐತಿಹಾಸಿಕ ಕಟ್ಟಡಗಳನ್ನು ನೋಡಲು ವಿದೇಶಿಗರು ಆಸಕ್ತಿ ಹೊಂದಿದ್ದಾರೆ.
- ಮುಂಬೈ: ದೇಶದ ಆರ್ಥಿಕ ರಾಜಧಾನಿ 'ಸಿಟಿ ಆಫ್ ಡ್ರೀಮ್ಸ್' ಎಂದೂ ಕರೆಯಲ್ಪಡುವ ನಗರವೇ ಮುಂಬೈ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಮತ್ತು ಜುಹು ಬೀಚ್‌ನಂತಹ ತಾಣಗಳು ವಿದೇಶಿಗರನ್ನು ಹೆಚ್ಚು ಸೆಳೆಯುತ್ತಿವೆ.
- ಬೆಂಗಳೂರು: ಐಟಿ ಸಿಟಿ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತು ಬೆಂಗಳೂರು ಅರಮನೆ. ಇದಲ್ಲದೆ, ಬೆಂಗಳೂರು ಸುತ್ತಮುತ್ತಲಿನ ಹಲವು ಐತಿಹಾಸಿಕ ಸ್ಥಳಗಳು ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
- ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ನಂತರದ ಸ್ಥಾನ ಪಡೆದುಕೊಂಡಿದೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರಾಚೀನ ದೇವಾಲಯಗಳು ಮತ್ತು ಸಂಸ್ಕೃತಿಯು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಶೇಷವಾಗಿ ಮರೀನಾ ಬೀಚ್, ಮಹಾಬಲೇಶ್ವರಂ, ಕಪಾಲೇಶ್ವರ ದೇವಸ್ಥಾನ ಮತ್ತು ಸೇಂಟ್ ಜಾರ್ಜ್ ಕೋಟೆ ಚೆನ್ನೈನ ಪ್ರಮುಖ ಆಕರ್ಷಣೀಯ ತಾಣಗಳಾಗಿವೆ.
- ಹಂಪಿ: ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯನ್ನು ವಿದೇಶಿಗರು ಹೆಚ್ಚು ಹುಡುಕುತ್ತಾರೆ. ಕರ್ನಾಟಕದ ಹಂಪಿ ಯುನೆಸ್ಕೋ ಪಾರಂಪರಿಕ ತಾಣವಾಗಿಯೂ ಗುರುತಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಪುರಾತನ ದೇವಾಲಯಗಳು ಹಾಗೂ ಕಟ್ಟಡಗಳನ್ನು ನೋಡಲು ಜಗತ್ತಿನಾದ್ಯಂತ ಪ್ರವಾಸಿಗರು ಆಗಮಿಸುತ್ತಾರೆ.
- ಲೇಹ್: ಲಡಾಖ್‌ನ ಒಂದು ಭಾಗ ಲೇಹ್. ವಿದೇಶಿ ಪ್ರವಾಸಿಗರು ಹೆಚ್ಚು ಹುಡುಕುವ ತಾಣಗಳ ಪಟ್ಟಿಯಲ್ಲಿ ಇದು ಆರನೇ ಸ್ಥಾನದಲ್ಲಿದೆ. ಇಲ್ಲಿಂದ ನೀವು ಎತ್ತರದ ಹಿಮಾಲಯವನ್ನು ನೋಡಬಹುದು. ಪ್ರಕೃತಿಪ್ರೇಮಿಗಳು ಮತ್ತು ಪ್ರಯಾಣಿಕರು ಇಲ್ಲಿಗೆ ಟ್ರೆಕ್ಕಿಂಗ್ ಮತ್ತು ಹಿಮಾಲಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
- ಪಟ್ನಿ ಟಾಪ್: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಪಟ್ನಿಟಾಪ್ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇಲ್ಲಿನ ಶಿವಾಲಿಕ್ ಬೆಟ್ಟಗಳಿಂದ ಸೂರ್ಯೋದಯ, ಸೂರ್ಯಾಸ್ತ ಮತ್ತು ಹುಲ್ಲುಗಾವಲುಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ.
- ಪಹಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಪಹಲ್ ಗಾಮ್ ಈ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದೆ. ಅನಂತನಾಗ್ ಜಿಲ್ಲೆಯ ಬೇತಾಬ್ ಕಣಿವೆ ಮತ್ತು ಅರು ಕಣಿವೆಯು ವಿದೇಶಿ ಪ್ರವಾಸಿಗರಿಗೆ ಬಹಳ ಆಕರ್ಷಣೀಯ ತಾಣಗಳಾಗಿವೆ.
- ಮಡಿಕೇರಿ: ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ಒಂಬತ್ತನೇ ಸ್ಥಾನದಲ್ಲಿದೆ. ಕೋಟೆ, ಕಾಫಿ ತೋಟಗಳು, ಬೆಟ್ಟಗಳು ಮತ್ತು ಜಲಪಾತಗಳನ್ನು ನೋಡಲು ವಿದೇಶಿ ಪ್ರವಾಸಿಗರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ.
- ವಿಜಯವಾಡ: ಆಂಧ್ರ ಪ್ರದೇಶದ ವಿಜಯವಾಡ ಹತ್ತನೇ ಸ್ಥಾನದಲ್ಲಿದೆ. ಇಲ್ಲಿ ಹರಿಯುವ ಕೃಷ್ಣಾ ನದಿ, ಕನಕದುರ್ಗ ದೇವಸ್ಥಾನ, ಪ್ರಕಾಶಂ ಬ್ಯಾರೇಜ್ ಮತ್ತು ಉಂಡವಳ್ಳಿ ಗುಹೆಗಳು ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣಗಳಾಗಿವೆ.