ಟೆಲ್ ಅವೀವ್(ಇಸ್ರೇಲ್): ರಫಾ ಮೇಲಿನ ನೆಲದ ಆಕ್ರಮಣ ನಿಲ್ಲಿಸಿದರೆ ಹಮಾಸ್ ಮಿಲಿಟರಿ ಮುಖ್ಯಸ್ಥ ಯಾಹ್ಯಾ ಸಿನ್ವರ್ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ನೀಡುವುದಾಗಿ ಅಮೆರಿಕದ ಬೇಹುಗಾರಿಕೆ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಮುಖ್ಯಸ್ಥ ವಿಲಿಯಂ ಬರ್ನ್ಸ್ ಅವರು ಇಸ್ರೇಲ್ಗೆ ಆಫರ್ ನೀಡಿದ್ದಾರೆ.
ಯಾಹ್ಯಾ ಸಿನ್ವರ್ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಹಿಂದಿನ ಮಾಸ್ಟರ್ಮೈಂಡ್ ಎಂದು ಇಸ್ರೇಲ್ ನಂಬಿದ್ದು, ಆಗಿನಿಂದಲೂ ಅದು ಸಿನ್ವರ್ನನ್ನು ನಿರಂತರವಾಗಿ ಹುಡುಕಾಡುತ್ತಿದೆ. ಸದ್ಯ ಈತ ಖಾನ್ ಯೂನಿಸ್ ಮತ್ತು ರಫಾ ಪ್ರದೇಶದ ನಡುವೆ ಹರಡಿರುವ ಹಮಾಸ್ ಸುರಂಗ ಜಾಲದಲ್ಲಿ ಅಡಗಿದ್ದಾನೆ ಎಂದು ವರದಿಯಾಗಿದೆ.
ರಫಾ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 1.3 ಮಿಲಿಯನ್ ಜನ ವಾಸವಾಗಿದ್ದಾರೆ. ಒಂದೊಮ್ಮೆ ಇಲ್ಲಿ ಇಸ್ರೇಲ್ ಪೂರ್ಣಪ್ರಮಾಣದ ಯುದ್ಧ ಆರಂಭಿಸಿದರೆ ವ್ಯಾಪಕ ಪ್ರಮಾಣದ ಸಾವು ನೋವುಗಳು ಉಂಟಾಗಬಹುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಫಾದಲ್ಲಿ ಯುದ್ಧ ಆರಂಭಿಸದಂತೆ ಅಮೆರಿಕ ಇಸ್ರೇಲ್ ಸರ್ಕಾರವನ್ನು ಒತ್ತಾಯಿಸುತ್ತಿದೆ.
ವಿಲಿಯಂ ಬರ್ನ್ಸ್ ಅಮೆರಿಕದ ಅತ್ಯಂತ ಪ್ರಭಾವಿ ಅಧಿಕಾರಿಯಾಗಿದ್ದು, ಹಲವಾರು ಹಿರಿಯ ಮಧ್ಯಪ್ರಾಚ್ಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇಸ್ರೇಲ್ ನಿರಂತರವಾಗಿ ಹುಡುಕಾಡುತ್ತಿರುವ ಯಾಹ್ಯಾ ಸಿನ್ವರ್ನ ಚಲನವಲನಗಳ ಬಗ್ಗೆ ಅಮೆರಿಕದ ಗುಪ್ತಚರ ಸಂಸ್ಥೆಯು ಅತ್ಯಂತ ಸೂಕ್ಷ್ಮವಾದ ಮಾಹಿತಿಗಳನ್ನು ನೀಡಬಹುದು ಎಂದು ಬರ್ನ್ಸ್ ಹೇಳಿರುವುದಾಗಿ ಇಸ್ರೇಲಿ ಪ್ರಧಾನಿ ಕಚೇರಿಯ ಮೂಲಗಳು ಹೇಳಿವೆ.
ಯಾಹ್ಯಾ ಸಿನ್ವರ್ ಅವರನ್ನು ಯಾವುದೇ ಬೆಲೆ ತೆತ್ತಾದರೂ ಹಿಡಿಯುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಬಹಿರಂಗವಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಸಿಐಎ ಮುಖ್ಯಸ್ಥ ಬರ್ನ್ಸ್ ಈ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕ್ರಮವಾಗಿ ಮೊಸ್ಸಾದ್ ಮತ್ತು ಶಿನ್ ಬೆಟ್ ಮುಖ್ಯಸ್ಥರಾದ ಡೇವಿಡ್ ಬಾರ್ನಿಯಾ ಮತ್ತು ರೋನೆನ್ ಬಾರ್ ಅವರೊಂದಿಗೆ ನೇರ ಮಾತುಕತೆ ನಡೆಸುತ್ತಿದ್ದಾರೆ.
ನವೆಂಬರ್ 2023ರ ಕೊನೆಯ ವಾರದಲ್ಲಿ ಏರ್ಪಟ್ಟ ಒಂದು ವಾರದ ಕದನ ವಿರಾಮದ ಸಮಯದಲ್ಲಿ ಹಮಾಸ್ ಬಳಿಯಿದ್ದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವಲ್ಲಿ ಬರ್ನ್ಸ್ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ ಇಸ್ರೇಲ್ ರಕ್ಷಣಾ ಪಡೆಗಳು ಈಗಾಗಲೇ ರಫಾದಲ್ಲಿ ಆಕ್ರಮಣವನ್ನು ಪ್ರಾರಂಭಿಸಿರುವುದರಿಂದ ಇಸ್ರೇಲ್ ಯುದ್ಧ ಕ್ಯಾಬಿನೆಟ್ ಈ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: 'ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪವಿಲ್ಲ' ರಷ್ಯಾದ ಆರೋಪ ತಳ್ಳಿಹಾಕಿದ ಯುಎಸ್ - lok sabha election 2024