ಟೆಲ್ ಅವೀವ್ : ಒತ್ತೆಯಾಳುಗಳ ವಿನಿಮಯದ ಒಪ್ಪಂದ ಯಶಸ್ವಿಯಾಗದಿದ್ದರೆ ರಂಜಾನ್ ತಿಂಗಳಲ್ಲಿ ಕೂಡ ರಫಾದಲ್ಲಿ ಇಸ್ರೇಲ್ ರಕ್ಷಣಾ ಪಡೆ ಸೇನಾ ಕಾರ್ಯಾಚರಣೆ ಮುಂದುವರೆಸಲಿದೆ ಎಂದು ಇಸ್ರೇಲ್ ಸಚಿವ ಮತ್ತು ಸರ್ಕಾರದ ಯುದ್ಧ ಕ್ಯಾಬಿನೆಟ್ ಸದಸ್ಯ ಬೆನ್ನಿ ಗಾಂಟ್ಜ್ ಹೇಳಿದ್ದಾರೆ. "ಒತ್ತೆಯಾಳುಗಳ ವಿನಿಮಯ ಒಪ್ಪಂದ ಆಗದಿದ್ದರೆ ನಾವು ರಂಜಾನ್ ತಿಂಗಳಲ್ಲೂ ಕಾರ್ಯಾಚರಣೆ ಮುಂದುವರಿಸುತ್ತೇವೆ" ಎಂದು ಗಾಂಟ್ಜ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ ಒತ್ತೆಯಾಳುಗಳ ವಿನಿಮಯ ಒಪ್ಪಂದ ಇಷ್ಟರಲ್ಲೇ ಜಾರಿಗೆ ಬರುವ ಲಕ್ಷಣಗಳಿವೆ ಎಂದು ಸಶಸ್ತ್ರ ಸಿಬ್ಬಂದಿಯ ಮಾಜಿ ಮುಖ್ಯಸ್ಥರಾಗಿದ್ದ ಬೆನ್ನಿ ಗಾಂಟ್ಜ್ ಹೇಳಿದರು.
ಸಕಾರಾತ್ಮಕ ರೀತಿ ಮಾತುಕತೆ: ಈ ದಿನಗಳಲ್ಲಿ ಹೊಸ ಚೌಕಟ್ಟಿನಡಿ ಒಪ್ಪಂದ ಮಾತುಕತೆಗಳು ನಡೆಯುತ್ತಿವೆ ಮತ್ತು ಮಾತುಕತೆಗಳು ಸಕಾರಾತ್ಮಕವಾಗಿ ಮುಂದುವರಿಯುವ ಆರಂಭಿಕ ಚಿಹ್ನೆಗಳಿವೆ. ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಯಾವುದೇ ಅವಕಾಶವನ್ನು ಇಸ್ರೇಲ್ ಸರ್ಕಾರ ಕಳೆದುಕೊಳ್ಳುವುದಿಲ್ಲ. ಆದರೆ, ಐಡಿಎಫ್ ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ತಯಾರಿ ನಡೆಸುತ್ತಿದೆ. ಪ್ಯಾಲೆಸ್ಟೈನ್ ನಾಗರಿಕರನ್ನು ಪ್ರದೇಶದಿಂದ ಸ್ಥಳಾಂತರಿಸಿದ ನಂತರವೇ ಇಲ್ಲಿ ಐಡಿಎಫ್ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಗಾಂಟ್ಜ್ ಹೇಳಿದರು.
ಏತನ್ಮಧ್ಯೆ ಯುಎಸ್ ಅಧ್ಯಕ್ಷರ ಮಧ್ಯಪ್ರಾಚ್ಯ ವಿಭಾಗದ ಉನ್ನತ ಸಲಹೆಗಾರ ಬ್ರೆಟ್ ಮೆಕ್ ಗುರ್ಕ್ ಮಾತುಕತೆ ನಡೆಸಲು ಈಜಿಪ್ಟ್ ಮತ್ತು ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಇದು ಒಂದು ತಿಂಗಳ ರಂಜಾನ್ ರಜಾದಿನದ ಪ್ರಾರಂಭದ ವೇಳೆಗೆ ಹೋರಾಟವನ್ನು ನಿಲ್ಲಿಸುವ ಒಪ್ಪಂದವೊಂದನ್ನು ಜಾರಿಗೆ ತರುವ ಪ್ರಯತ್ನದ ಭಾಗವಾಗಿದೆ. ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಉನ್ನತ ನಿಯೋಗವು ಮಾರ್ಚ್ 10 ರಿಂದ ಪ್ರಾರಂಭವಾಗುವ ಪವಿತ್ರ ರಂಜಾನ್ ತಿಂಗಳಲ್ಲಿ ಕದನ ವಿರಾಮಕ್ಕಾಗಿ ಮಧ್ಯಸ್ಥಿಕೆ ಮಾತುಕತೆ ನಡೆಸಲು ಕೈರೋಗೆ ಆಗಮಿಸಿದೆ.
ಕದನವಿರಾಮಕ್ಕೆ ಟರ್ಕಿ ಒತ್ತಾಯ: ಬ್ರೆಜಿಲ್ನಲ್ಲಿ ನಡೆದ ಜಿ 20 ಸಭೆಯಲ್ಲಿ ಮಾತನಾಡಿದ ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿದಾನ್, ಗಾಝಾದಲ್ಲಿ ತುರ್ತು ಕದನ ವಿರಾಮ ಮತ್ತು ದ್ವಿ-ರಾಷ್ಟ್ರ ಪರಿಹಾರದ ಕಡೆಗೆ ಪ್ರಯತ್ನಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಟರ್ಕಿಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಗಾಜಾ ಮೇಲಿನ ದಾಳಿಗಾಗಿ ಇಸ್ರೇಲ್ ಅನ್ನು ಕಟುವಾಗಿ ಟೀಕಿಸಿರುವ ಮತ್ತು ಐಸಿಜೆಯಲ್ಲಿ ಇಸ್ರೇಲ್ ವಿರುದ್ಧದ ನರಮೇಧದ ಆರೋಪವನ್ನು ಬೆಂಬಲಿಸಿರುವ ಟರ್ಕಿ, ಪದೇ ಪದೇ ಕದನ ವಿರಾಮಕ್ಕೆ ಕರೆ ನೀಡಿದೆ.
ಇದನ್ನೂ ಓದಿ: ಆರ್ಥಿಕ ಕುಸಿತ: ಚೀನಾದಲ್ಲಿ ಕಾರ್ಮಿಕರ ಪ್ರತಿಭಟನೆ ತೀವ್ರ ಹೆಚ್ಚಳ