ಚಿಕ್ಕಬಳ್ಳಾಪುರ: ಮಹಿಳೆಯರ ಒಡವೆ ಮತ್ತು ಹಣ ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಗೌರಿಬಿದನೂರು ನಗರ ಪೊಲೀಸರು ಬಂಧಿಸಿದ್ದಾರೆ.
ನ.16ರಂದು ಶಾಂತಕುಮಾರಿ ಎಂಬವರು ತಾವು ಬೆಂಗಳೂರಿಗೆ ಹೋಗಲು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಎರಡೆಳೆಯ ಬಂಗಾರದ ಚೈನ್ ಅನ್ನು ಬುರ್ಕಾ ಧರಿಸಿದ್ದ ಮಹಿಳೆಯರು ಕಳವು ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಡಿ.6ರಂದು ರತ್ನಮ್ಮ ಎಂಬವರು ತಾವು ಬೆಂಗಳೂರಿಗೆ ಹೋಗಲು ಬಸ್ ಹತ್ತುವಾಗ ಬ್ಯಾಗ್ನಲ್ಲಿದ್ದ ಒಂದು ಲಕ್ಷ ರೂ. ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ದೂರು ನೀಡಿದ್ದರು.
ಈ ಕುರಿತು ದೂರು ದಾಖಲಿಸಿಕೊಂಡಿದ್ದ ನಗರ ಠಾಣೆಯ ಪೊಲೀಸರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಬಂಧಿತರನ್ನು ರೇಖಾ ಬಾಯಿ, ರೋಜಾ, ಕರೀನಾ ಎಂದು ಗುರುತಿಸಲಾಗಿದೆ. ಇವರು ಅಕ್ಕ-ತಂಗಿಯರು ಎಂದು ತಿಳಿದು ಬಂದಿದೆ.
ಆರೋಪಿಗಳು ತುಮಕೂರು, ಹೊಳೆನರಸೀಪುರ, ಹಲಸೂರು, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ನಗರಠಾಣೆಯ ಸಿಪಿಐ ಸತ್ಯನಾರಾಯಣ್, ಪಿಎಸ್ಐ ಚಂದ್ರಕಲಾ, ಸಿಬ್ಬಂದಿ ಶ್ರೀರಾಮಯ್ಯ, ಪುಷ್ಪ, ಶಿವಶೇಖರ್, ಮಹಂತೇಶ್, ಗ್ರಾಮಾಂತರ ಠಾಣೆಯ ಸಿಬ್ಬಂದಿ ರಿಜ್ವಾನ್, ಶ್ರೀನಿವಾಸರೆಡ್ಡಿ ಮತ್ತು ಅಶ್ವತ್ಥಪ್ಪ ಅವರ ಕಾರ್ಯಕ್ಷಮತೆಗೆ ಜಿಲ್ಲಾ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕಾರಿನ ಗ್ಲಾಸ್ ಒಡೆದು 2 ಲಕ್ಷ ಕಳವು- ಸಿಸಿಟಿವಿ ದೃಶ್ಯ - Money Theft - MONEY THEFT