ಕೊಲಂಬಸ್ (ಅಮೆರಿಕ): ಅಮೆರಿಕದ ಅಧ್ಯಕ್ಷ ಹುದ್ದೆಯ ಮೇಲೆ ಎರಡನೇ ಬಾರಿಗೆ ಕಣ್ಣಿಟ್ಟಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಮ್ಮ ರಿಪಬ್ಲಿಕನ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಜೆ.ಡಿ.ವಾನ್ಸ್ ಅವರನ್ನು ಹೆಸರಿಸಿದ್ದಾರೆ. 39 ವರ್ಷದ ಜೆ.ಡಿ.ವಾನ್ಸ್, ಟ್ರಂಪ್ ಅವರಿಗಿಂತ 40 ವರ್ಷ ಚಿಕ್ಕವರು. ಅಲ್ಲದೇ, ಓಹಿಯೋದಿಂದ ಮೊದಲ ಬಾರಿಗೆ ಸೆನೆಟರ್ ಆಗಿದ್ದಾರೆ. ಇವರ ಪತ್ನಿ ಭಾರತೀಯ ಮೂಲದವರು ಎಂಬುವುದು ಮತ್ತೊಂದು ವಿಶೇಷ!.
ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಗೆ ಪಕ್ಷದಿಂದ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಹುದ್ದೆಗೆ ಜೆ.ಡಿ.ವಾನ್ಸ್ ಅವರನ್ನು ಔಪಚಾರಿಕವಾಗಿ ಅಭ್ಯರ್ಥಿಗಳೆಂದು ಘೋಷಿಸಲಾಯಿತು. ಜೆ.ಡಿ.ವಾನ್ಸ್ ಖಾಸಗಿ ಇಕ್ವಿಟಿ ಹೂಡಿಕೆದಾರರಾಗಿದ್ದು, 'ಹಿಲ್‌ಬಿಲ್ಲಿ ಎಲಿಜಿ' ಪುಸ್ತಕದ ಲೇಖಕರಾಗಿದ್ದಾರೆ. 'ಹಿಲ್‌ಬಿಲ್ಲಿ ಎಲಿಜಿ' ಪುಸ್ತಕವು ಅಮೆರಿಕದ ಕಾರ್ಮಿಕ ವರ್ಗದವರ ಆತ್ಮಚರಿತ್ರೆ ಎಂದೇ ಹೇಳಲಾಗುತ್ತದೆ. ಈ ಪುಸ್ತಕದ ಮೂಲಕವೇ ವಾನ್ಸ್ ಮೊದಲ ಬಾರಿಗೆ ದೇಶದ ಗಮನ ಸೆಳೆದಿದ್ದರು. ರಾಜಕೀಯಕ್ಕೆ ಹೊಸಬರಾದ ಇವರು, 2022ರಲ್ಲಿ ಅಮೆರಿಕದ ಸೆನೆಟ್‌ಗೆ ಚುನಾಯಿತರಾಗಿದ್ದಾರೆ.
ವಾನ್ಸ್ ಪತ್ನಿ ಭಾರತೀಯಳು!: ವಾನ್ಸ್ ಅವರು ಭಾರತದ ಮೂಲದ ಉಷಾ ವಾನ್ಸ್ ಅವರನ್ನು ವಿವಾಹವಾಗಿದ್ದಾರೆ. ಇವರ ಹುಟ್ಟು ಹೆಸರು ಉಷಾ ಚಿಲುಕುರಿ. ಉಷಾ ಯಶಸ್ವಿ ವಕೀಲರಾಗಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಅವರ ಬಳಿ ಕ್ಲರ್ಕ್ ಆಗಿ ಕೆಲಸ ಮಾಡಿದ್ದಾರೆ. ಉಷಾ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಶಿಕ್ಷಣ ಪಡೆದಿದ್ದು, ತಮ್ಮ ಕಠಿಣ ಪರಿಶ್ರಮದ ಮೇಲೆಯೇ ಬೆಳೆದರು. ಉಷಾ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಪತಿ ವಾನ್ಸ್ ಸಹ ಯೇಲ್ ಕಾನೂನು ಶಾಲೆಯಿಂದ ಪದವಿಯಿಂದ ಪಡೆದಿದ್ದು, ಇಲ್ಲಿಯೇ ಇಬ್ಬರ ಪರಿಚಯವಾಗಿತ್ತು.
ಟ್ರಂಪ್ರನ್ನು ಅಮೆರಿಕದ ಹಿಟ್ಲರ್ ಎಂದಿದ್ದ ವಾನ್ಸ್!: ಅಚ್ಚರಿ ಎಂದರೆ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿರುವ ಜೆ.ಡಿ.ವಾನ್ಸ್ ಹಿಂದಿನಿಂದಲೂ ಟ್ರಂಪ್ ಬೆಂಬಲಿಗರಾಗಿರಲಿಲ್ಲ. ಅಷ್ಟೇ ಅಲ್ಲ, ಒಮ್ಮೆ ಟ್ರಂಪ್ ಅವರನ್ನು 'ಅಮೆರಿಕದ ಹಿಟ್ಲರ್' ಎಂದೂ ಕರೆದುಬಿಟ್ಟಿದ್ದರು. ಈಗ ಟ್ರಂಪ್ ಅವರ ಹತ್ಯೆಯ ಪ್ರಯತ್ನದ ನಂತರ ವಾನ್ಸ್ ಅಧ್ಯಕ್ಷ ಜೋ ಬೈಡನ್ ಅವರನ್ನು ದೂಷಿಸಿದ್ದಾರೆ.
ವಾನ್ಸ್ ಬಗ್ಗೆ ಟ್ರಂಪ್ ಸುದೀರ್ಘ ಪೋಸ್ಟ್: ರಿಪಬ್ಲಿಕನ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಜೆ.ಡಿ.ವಾನ್ಸ್ ಬಗ್ಗೆ ಟ್ರಂಪ್ ವಿಸ್ತಾರವಾದ ಪೋಸ್ಟ್ ಮಾಡಿದ್ದಾರೆ. ''ಸುದೀರ್ಘ ಚರ್ಚೆ ಮತ್ತು ಚಿಂತನೆಯ ನಂತರ ಮತ್ತು ಇತರ ಹಲವರ ಅಗಾಧ ಪ್ರತಿಭೆಯನ್ನು ಪರಿಗಣಿಸಿ ಯುನೈಟೆಡ್ ಸ್ಟೇಟ್ಸ್‌ನ ಉಪಾಧ್ಯಕ್ಷ ಸ್ಥಾನವನ್ನು ವಹಿಸಲು ಸೂಕ್ತ ವ್ಯಕ್ತಿ ಎಂದರೆ, ಓಹಿಯೋದ ಗ್ರೇಟ್ ಸ್ಟೇಟ್‌ನ ಸೆನೆಟರ್ ಜೆ.ಡಿ.ವಾನ್ಸ್ ಎಂದು ನಾನು ನಿರ್ಧರಿಸಿದ್ದೇನೆ'' ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
''ಮರೈನ್ ಕಾರ್ಪ್ಸ್‌ನಲ್ಲಿ ನಮ್ಮ ದೇಶಕ್ಕೆ ಗೌರವಯುತವಾಗಿ ಜೆ.ಡಿ. ಸೇವೆ ಸಲ್ಲಿಸಿದ್ದಾರೆ. ಓಹಿಯೋ ಸ್ಟೇಟ್ ಯೂನಿವರ್ಸಿಟಿಯಿಂದ ಎರಡು ವರ್ಷಗಳಲ್ಲಿ ಪದವಿ ಪಡೆದ್ದಿದ್ದಾರೆ. ಸುಮ್ಮಾ ಕಮ್ ಲಾಡ್ ಮತ್ತು ಯೇಲ್ ಲಾ ಸ್ಕೂಲ್ ಪದವೀಧರರಾಗಿದ್ದಾರೆ. ಯೇಲ್ ಲಾ ಜರ್ನಲ್‌ನ ಸಂಪಾದಕ ಮತ್ತು ಯೇಲ್ ಲಾ ವೆಟರನ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು. ಜೆ.ಡಿ. ಅವರ ಪುಸ್ತಕ 'ಹಿಲ್‌ಬಿಲ್ಲಿ ಎಲಿಜಿ' ಪ್ರಮುಖ ಬೆಸ್ಟ್ ಸೆಲ್ಲರ್ ಮತ್ತು ಚಲನಚಿತ್ರವಾಗಿದೆ. ಯಾಕೆಂದರೆ, ಇದು ನಮ್ಮ ದೇಶದ ಕಠಿಣ ಪರಿಶ್ರಮಿ ಪುರುಷರು ಮತ್ತು ಮಹಿಳೆಯರನ್ನು ಬೆಂಬಲಿಸಿದೆ'' ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಶಂಕಿತ ಶೂಟರ್ ಹತ್ಯೆ