ಲಂಡನ್: ಇಂಗ್ಲೆಂಡ್‌ನ ಜಾನ್ ಆಲ್‌ಫ್ರೆಡ್ ಟಿನ್ನಿಸ್‌ವುಡ್ ವಿಶ್ವದ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಸುದೀರ್ಘ ಜೀವನದ ರಹಸ್ಯವನ್ನು ಇವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ. ಇದು ನನ್ನ ಅದೃಷ್ಟವೇ ಸರಿ. ಪ್ರತಿ ಶುಕ್ರವಾರ ಹಿತಮಿತವಾಗಿ ಮೀನು ಹಾಗೂ ಚಿಪ್ಸ್ ತಿನ್ನುವುದೇ ನನ್ನ ಬದುಕಿನ ರಹಸ್ಯ ಎಂದು ಅವರು ಹೇಳಿದ್ದಾರೆ.
111 ವರ್ಷದ ಟಿನ್ನಿಸ್‌ವುಡ್ ತಮ್ಮ ಜೀವಿತಾವಧಿಯಿಂದಲೇ ಗಿನ್ನೆಸ್ ವಿಶ್ವದಾಖಲೆ ಪುಟ ಸೇರಿದವರು. ಇವರನ್ನು ವಿಶ್ವದ ಹಿರಿಯ ವ್ಯಕ್ತಿ ಎಂದು ಘೋಷಿಸಲಾಗಿದೆ. ಇದುವರೆಗೆ ಈ ದಾಖಲೆಯನ್ನು ವೆನೆಜುವೆಲಾದ 114 ವರ್ಷದ ಜುವಾನ್ ವಿಸೆಂಟೆ ಪ್ರೆಜ್ ಮತ್ತು ಜಪಾನ್‌ನ 112 ವರ್ಷದ ಗಿಸಾಬುರೊ ಸೊನೊಬೆ ಹೊಂದಿದ್ದರು. ಮಾರ್ಚ್ 31ರಂದು ಗಿಸಾಬುರೊ ನಿಧನರಾದರೆ, ಇದೇ ತಿಂಗಳು ಪ್ರೆಜ್ ಇಹಲೋಕ ತ್ಯಜಿಸಿದರು. ಹೀಗಾಗಿ ಈಗ ವಿಶ್ವದ ಹಿರಿಯ ವ್ಯಕ್ತಿಯ ಸ್ಥಾನವನ್ನು ಟಿನ್ನಿಸ್‌ವುಡ್ ತುಂಬಿದ್ದಾರೆ.
ಗುರುವಾರ ವಾಯುವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ಇವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಹಿರಿಯ ವ್ಯಕ್ತಿ ಎಂಬ ಪ್ರಮಾಣಪತ್ರವನ್ನು ಸ್ವೀಕರಿಸಿದರು. ವಿಶೇಷವೆಂದರೆ, ಟಿನ್ನಿಸ್‌ವುಡ್ ಅವರೊಂದಿಗೆ ಟೈಟಾನಿಕ್ ಹಡಗು ದುರಂತ ತಳಕು ಹಾಕಿಕೊಂಡಿದೆ. 1912ರಲ್ಲಿ ಟೈಟಾನಿಕ್ ಮುಳುಗಿದ ಕೆಲವು ತಿಂಗಳ ನಂತರ, ಆಗಸ್ಟ್ 26ರಂದು ಲಿವರ್‌ಪೂಲ್‌ನಲ್ಲಿ ಟಿನ್ನಿಸ್‌ವುಡ್ ಜನಿಸಿದ್ದಾರೆ.
ಮತ್ತೊಂದು ವಿಶೇಷವೆಂದರೆ, ಎರಡನೇ ವಿಶ್ವ ಯುದ್ಧದಲ್ಲಿ ತಮ್ಮ ಜೀವನವನ್ನೂ ಟಿನ್ನಿಸ್‌ವುಡ್ ಸವೆಸಿದ್ದಾರೆ. ಈ ವಿಶ್ವ ಸಮರದಲ್ಲಿ ಬ್ರಿಟಿಷ್ ಆರ್ಮಿ ಪೇ ಕಾರ್ಪ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತ ಅಕೌಂಟೆಂಟ್ ಕೂಡ ಆಗಿದ್ದಾರೆ. ಮುತ್ತಜ್ಜ ಆಗಿರುವ ಈ ಹಿರಿಯ ಜೀವಿ ಹಿತಮಿತವೇ ತಮ್ಮ ಆರೋಗ್ಯಕರ ಜೀವನದ ಗುಟ್ಟು ಎಂದು ಬಹಿರಂಗಪಡಿಸಿದ್ದಾರೆ. ಅವರು ಧೂಮಪಾನ ಮಾಡುವುದಿಲ್ಲ. ಯಾವಾಗಲೊಮ್ಮೆ ಎಂಬಂತೆ ವಿರಳವಾಗಿ ಮದ್ಯ ಸೇವಿಸುತ್ತಾರೆ. ವಾರಕ್ಕೊಮ್ಮೆ ಮೀನು ಮತ್ತು ಚಿಪ್ ಸಪ್ಪರ್ ಹೊರತುಪಡಿಸಿ ಯಾವುದೇ ವಿಶೇಷ ಆಹಾರವನ್ನು ಸೇವಿಸುವುದಿಲ್ಲವಂತೆ.
ನೀವು ಹೆಚ್ಚು ಕುಡಿದರೂ ಅಥವಾ ಹೆಚ್ಚು ತಿಂದರೂ ಅಥವಾ ಹೆಚ್ಚು ನಡೆದರೂ ಅಂತಿಮವಾಗಿ ತೊಂದರೆ ಅನುಭವಿಸುವಿರಿ ಎನ್ನುವ ಈ ಟಿನ್ನಿಸ್‌ವುಡ್, ನನ್ನ ಜೀವಿತಾವಧಿ ಶುದ್ಧವಾದ ಅದೃಷ್ಟವೇ ಸರಿ ಎನ್ನುತ್ತಾರೆ. ಸ್ಪೇನ್‌ನ 117 ವರ್ಷದ ಮಾರಿಯಾ ಬ್ರನ್ಯಾಸ್ ಮೊರೆರಾ ವಿಶ್ವದ ಅತ್ಯಂತ ಹಿರಿಯ ಮಹಿಳೆಯಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಆರೋಗ್ಯ ದಿನ: ಆರೋಗ್ಯ ವಿಷಯದಲ್ಲಿ ರಾಜಿಯೇ ಇಲ್ಲ ಅಂತಾರೆ ಈ ಗಣ್ಯರು!