ಡಮಾಸ್ಕಸ್(ಸಿರಿಯಾ): ಮಂಗಳವಾರ ರಾತ್ರಿ ಡಮಾಸ್ಕಸ್‌ನ ಜನನಿಬಿಡ ಪ್ರದೇಶ ಮಜ್ಜೆ ಸಮೀಪದ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ದಾಳಿಯಲ್ಲಿ ಮತ್ತು 11 ಜನರು ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸ್ಥಳೀಯ ಕಾಲಮಾನ ಸುಮಾರು 8:15ರ ಗಂಟೆಗೆ ಸಂಭವಿಸಿದ ದಾಳಿಯಲ್ಲಿ ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನ ದಿಕ್ಕಿನಿಂದ ಮೂರು ಕ್ಷಿಪಣಿಗಳನ್ನೂ ಹಾರಿಸಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿವೆ ಎಂದು ಹೇಳಿಕೆ ತಿಳಿಸಿದೆ. ಮಜ್ಜೆಯ ಹೃದಯಭಾಗದಲ್ಲಿರುವ ವಸತಿ ಮತ್ತು ವಾಣಿಜ್ಯ ಕೇಂದ್ರವಾದ ಶೇಖ್ ಸಾದ್ ಪ್ರದೇಶದಲ್ಲಿ 14 ಅಂತಸ್ತಿನ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕ್ರೂರ ಅಪರಾಧ ಎಂದ ಸಿರಿಯಾ: ಮೂರು ಕ್ಷಿಪಣಿಗಳ ದಾಳಿಯಿಂದ ಕಟ್ಟಡದ ಮೂರು ಮಹಡಿಗಳು ಸಂಪೂರ್ಣವಾಗಿ ಹಾನಿಗೊಳಗಿವೆ. ರಕ್ಷಣಾ ಪಡೆಗಳು ಬದುಕುಳಿದವರು ಮತ್ತು ಗಾಯಾಳುಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಘಟನೆಗೆ ಪ್ರತಿಕ್ರಿಯೆಯಾಗಿ, ಸಿರಿಯನ್ ವಿದೇಶಾಂಗ ಸಚಿವಾಲಯವು ತೀವ್ರ ಖಂಡನೆ ವ್ಯಕ್ತಪಡಿಸಿದೆ. ದಾಳಿಯನ್ನು 'ಕ್ರೂರ ಅಪರಾಧ' ಮತ್ತು ಅಂತಾರಾಷ್ಟ್ರೀಯ ಕಾನೂನಿನ 'ಗಂಭೀರ ಉಲ್ಲಂಘನೆ' ಎಂದು ಸಚಿವಾಲಯ ಕಿಡಿಕಾರಿದೆ.
'ನಿರಾಯುಧ ನಾಗರಿಕರ ವಿರುದ್ಧದ ಈ ಕ್ರೂರ ಅಪರಾಧವು ಪ್ಯಾಲೆಸ್ಟೀನಿಯನ್ನರು ಮತ್ತು ಲೆಬನಾನಿನ ವಿರುದ್ಧ ಇಸ್ರೇಲ್ ನಡೆಸುತ್ತಿರುವ ನರಮೇಧದ ಮುಂದುವರಿಕೆಯಾಗಿದೆ' ಎಂದು ಸಿರಿಯನ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ತನ್ನ ಕ್ರೂರ ನಡವಳಿಕೆ ಮುಂದುವರೆಸುವುದನ್ನು ತಡೆಯಲು ತಕ್ಷಣದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮಗಳ ಅಗತ್ಯತೆ ಇದೆ ಎಂದು ಸಚಿವಾಲಯ ಒತ್ತಿಹೇಳಿದೆ. ಶೇಖ್ ಸಾದ್ ಪ್ರದೇಶವು ನೇರವಾಗಿ ಇಸ್ರೇಲಿ ದಾಳಿಗೆ ಗುರಿಯಾದ ಮೊದಲ ನಿದರ್ಶನ ಇದಾಗಿದೆ.
ಇದನ್ನೂ ಓದಿ: ಗುರಿ ಸಾಧಿಸುವವರೆಗೂ ಯುದ್ಧ ನಿಲ್ಲಿಸುವ ಮಾತೇ ಇಲ್ಲ: ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತಿಜ್ಞೆ