ವಾಷಿಂಗ್ಟನ್ (ಅಮೆರಿಕ): ಅಮೆರಿಕದಲ್ಲಿ ಭಾರತೀಯರು, ಹಿಂದೂಗಳು ಮತ್ತು ಹಿಂದೂ ಧರ್ಮದ ವಿರುದ್ಧದ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಇದನ್ನು ಸರ್ಕಾರ ತಡೆಯಬೇಕು ಎಂದು ಭಾರತೀಯ ಅಮೆರಿಕನ್ ಸೆನೆಟರ್ಗಳು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕನ್ ಕಾಂಗ್ರೆಸ್ಸಿಗ ಥಾನೇದಾರ್, ಈ ನಡುವೆ ಹಿಂದೂ ಧರ್ಮದ ಮೇಲೆ ಗಣನೀಯ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿರುವುದು ನೋಡಿದರೆ, ಇದು ಸಂಘಟಿತ ಹಿಂದೂ ವಿರೋಧಿ ದಾಳಿಯಾಗಿದೆ ಎಂದು ಶಂಕೆ ವ್ಯಕ್ತವಾಗುತ್ತಿದೆ. ಹಿಂದೂಗಳ ವಿರುದ್ಧ ಆನ್‌ಲೈನ್ ಸೇರಿದಂತೆ ಮತ್ತಿತರೆಡೆ ತಪ್ಪು ಮಾಹಿತಿ ಹರಿದಾಡುತ್ತಿವೆ ಎಂದು ಅವರು ಗಮನ ಸೆಳೆದರು.
ದಾಳಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಬಂಧನವೂ ಆಗಿಲ್ಲ. ಇದು ಮುಂದಿನ ದಿನಗಳಲ್ಲಿ ದಾಳಿಯು ಹೆಚ್ಚಾಗಲು ಕಾರಣವಾಗುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಇದರ ಪ್ರಮಾಣ ಏರಿಕೆಯಾಗಿದೆ. ಸಮುದಾಯದ ವಿರುದ್ಧ ಅತ್ಯಂತ ಸಂಘಟಿತವಾಗಿ ನಡೆಯುತ್ತಿರುವ ದುಷ್ಕೃತ್ಯವಾಗಿದೆ. ಸಮುದಾಯವು ಒಟ್ಟಾಗಿ ನಿಲ್ಲಬೇಕಾದ ಕಾಲ ಬಂದಿದೆ. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಥಾನೇದಾರ್ ಹೇಳಿದರು.
ಹಿಂದೂ ಧರ್ಮವನ್ನು ಪಾಲಿಸಿ, ಹಿಂದೂ ಮನೆಯಲ್ಲಿ ಹಿಂದೂವಾಗಿ ಬೆಳೆದ ನನಗೆ ಹಿಂದೂ ಧರ್ಮದ ಅರಿವಿದೆ. ನಮ್ಮ ಧರ್ಮ ಅತ್ಯಂತ ಶಾಂತಿಯುತ ಮತ್ತು ಇತರರ ಮೇಲೆ ಹಲ್ಲೆ, ದಬ್ಬಾಳಿಕೆಗೆ ಆಸ್ಪದ ನೀಡುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಕಳವಳಕಾರಿ: ಭಾರತೀಯ ಅಮೆರಿಕನ್ ಸಂಸದರಾದ ಥಾನೇದಾರ್ ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಅಮಿ ಬೇರಾ ಮತ್ತು ಪ್ರಮೀಳಾ ಜಯಪಾಲ್ ಅವರು ಇತ್ತೀಚೆಗೆ ಹಿಂದೂ ದೇವಾಲಯಗಳು ಮತ್ತು ಪೂಜಾ ಸ್ಥಳಗಳ ಮೇಲಿನ ದಾಳಿಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದ್ದರು.
ಆದಾಗ್ಯೂ, ಹಿಂದು ಪೂಜಾ ಸ್ಥಳಗಳ ಮೇಲೆ ದಾಳಿಗಳು ನಿಂತಿಲ್ಲ. ಹಿಂದೂಗಳನ್ನು ತಪ್ಪಾಗಿ ಅರ್ಥೈಸಿಕೊಂಡು, ಉದ್ದೇಶಪೂರ್ವಕವಾಗಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಹಿಂದು ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ವಿರುದ್ಧ ಕ್ರಮಕ್ಕೆ ಸೂಚಿಸಿದ ಬಳಿಕವೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸೇರಿದ ಅಮೆರಿಕದಾದ್ಯಂತ ದಾಳಿಗಳು ನಡೆಯುತ್ತಿವೆ. ಪೂಜಾ ಸ್ಥಳಗಳ ಮೇಲೆ ದಾಳಿ ಮಾಡುತ್ತಿರುವುದು ಅತ್ಯಂತ ಸಂಘಟಿತ ದುಷ್ಕೃತ್ಯವಾಗಿದೆ. ಇದು ಸಮುದಾಯದಲ್ಲಿ ಭಯವನ್ನು ಸೃಷ್ಟಿಸಿದೆ. ತನಿಖೆಗಳು ಪ್ರಗತಿ ಕಾಣುತ್ತಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ನಾವೆಲ್ಲ ಬದುಕಬೇಕಾಗಿದೆ ಎಂದು ಅವರು ಬೇಸರಿಸಿದರು.
ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ ಪ್ರತ್ಯುತ್ತರ ನೀಡುತ್ತೆ: ಇಸ್ರೇಲ್ ಸೇನಾ ಮುಖ್ಯಸ್ಥ - Israel will respond to Iran