ಬ್ರಾಟಿಸ್ಲಾವಾ : ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದೇಶದ ಉಪ ಪ್ರಧಾನಿ ರಾಬರ್ಟ್ ಕಲಿನಾಕ್ ಭಾನುವಾರ ಸುದ್ದಿ ಸಂಸ್ಥೆ ಟಿಎಎಸ್ಆರ್ಗೆ ತಿಳಿಸಿದ್ದಾರೆ.
"ಇಂದು ಬೆಳಗ್ಗೆ ವೈದ್ಯರು ನೀಡಿದ ವರದಿಯ ಆಧಾರದ ಮೇಲೆ, ಪ್ರಧಾನಿ ಫಿಕೊ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಾವು ಹೇಳಬಹುದು. ಆದಾಗ್ಯೂ, ಅವರ ಸ್ಥಿತಿ ಇನ್ನೂ ತುಂಬಾ ಗಂಭೀರವಾಗಿದೆ ಮತ್ತು ಚೇತರಿಸಿಕೊಳ್ಳಲು ಅವರಿಗೆ ದೀರ್ಘ ಸಮಯ ಮತ್ತು ವಿಶ್ರಾಂತಿಯ ಅಗತ್ಯವಿದೆ." ಎಂದು ಬನ್ಸ್ಕಾ ಬೈಸ್ಟ್ರಿಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ಉಪ ಮುಖ್ಯಸ್ಥ ಮಿಲನ್ ಅರ್ಬಾನಿ ಸುದ್ದಿಗಾರರಿಗೆ ತಿಳಿಸಿದರು.
"59 ವರ್ಷದ ಫಿಕೊ ಅವರನ್ನು ಈಗಿನ ಪರಿಸ್ಥಿತಿಯಲ್ಲಿ ರಾಜಧಾನಿ ಬ್ರಾಟಿಸ್ಲಾವಾದ ಆಸ್ಪತ್ರೆಗೆ ವರ್ಗಾಯಿಸುವುದು ಹತ್ತಿರದ ದಿನಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ಅಂಥ ಯಾವುದೇ ಯೋಜನೆಯನ್ನು ಮಾಡಲಾಗಿಲ್ಲ" ಎಂದು ರಕ್ಷಣಾ ಸಚಿವರೂ ಆಗಿರುವ ಕಲಿನಾಕ್ ಹೇಳಿದ್ದಾರೆ.
"ಅವರು ದೈಹಿಕವಾಗಿ ತಂಬಾ ಬಲಶಾಲಿಯಾಗಿದ್ದಾರೆ. ತುಂಬಾ ದಿನಗಳನ್ನು ತೆಗೆದುಕೊಂಡರೂ ಸರಿ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ" ಎಂದು ಕಲಿನಾಕ್ ತಿಳಿಸಿದರು.
ಸ್ಲೋವಾಕಿಯಾದ ಸಣ್ಣ ಪಟ್ಟಣವಾದ ಹ್ಯಾಂಡ್ಲೋವಾದಲ್ಲಿ ಕ್ಯಾಬಿನೆಟ್ ಸಭೆಯ ನಂತರ ಕೈಕುಲುಕಲು ಕಾಯುತ್ತಿದ್ದ ಜನಸಮೂಹದ ಮಧ್ಯೆ ಹೆಜ್ಜೆ ಹಾಕಿದ ಫಿಕೊ ಅವರ ಮೇಲೆ ತೀರಾ ಹತ್ತಿರದಿಂದ ಗುಂಡು ಹಾರಿಸಲಾಯಿತು. ದಾಳಿ ನಡೆಸಿದ ಆರೋಪಿಯನ್ನು 71 ವರ್ಷದ ಜುರಾಜ್ ಸಿ ಎಂದು ಗುರುತಿಸಲಾಗಿದ್ದು, ಫಿಕೊ ಅವರ ಸರ್ಕಾರದ ನೀತಿಗಳ ಮೇಲಿನ ದ್ವೇಷದಿಂದ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮತ್ತು ಸರ್ಕಾರದ ಮಾಹಿತಿ ತಿಳಿಸಿದೆ.
ಗೌಪ್ಯತೆ ನಿಯಮಗಳು ಮತ್ತು ಕಟ್ಟುನಿಟ್ಟಾದ ಭದ್ರತಾ ಮುನ್ನೆಚ್ಚರಿಕೆಗಳ ಅಡಿಯಲ್ಲಿ ವಿಚಾರಣೆಗಾಗಿ ಆರೋಪಿ ಜುರಾಜ್ನನ್ನು ಶನಿವಾರ ಪೆಜಿನೋಕ್ ಪಟ್ಟಣದ ವಿಶೇಷ ಕ್ರಿಮಿನಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಈ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯದ ವಕ್ತಾರೆ ಕಟರಿನಾ ಕುಡ್ಜಕೋವಾ ತಿಳಿಸಿದ್ದಾರೆ.
ಫಿಕೊ ಅವರ ಆರೋಗ್ಯ ಸುಧಾರಿಸುತ್ತಿದೆ ಮತ್ತು ಶನಿವಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವ ಜುಜಾನಾ ಡೊಲಿಂಕೊವಾ ತಿಳಿಸಿದ್ದಾರೆ. ಪ್ರಧಾನಿ ಫಿಕೊ ಶುಕ್ರವಾರ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಯುರೋಪಿಯನ್ ರಾಜಕೀಯ ನಾಯಕರೊಬ್ಬರ ಮೇಲೆ ನಡೆದ ಮೊದಲ ಪ್ರಮುಖ ಹತ್ಯೆ ಯತ್ನ ಇದಾಗಿದೆ.
ಇದನ್ನೂ ಓದಿ : ರಫಾದಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರೆಸಿದ ಇಸ್ರೇಲ್: ಈಜಿಪ್ಟ್ ಸಂಪರ್ಕಿಸುವ ಸುರಂಗ ಪತ್ತೆ - RAFAH OPERATION