ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಯಸಿದಲ್ಲಿ ಅವರ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದೊಂದಿಗೆ ಮಾತುಕತೆಗೆ ಸಿದ್ಧ ಎಂದು ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಹೇಳಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅಸ್ಥಿರತೆಯಿಂದ ದೇಶ ಹೆಣಗಾಡುತ್ತಿರುವ ಮಧ್ಯೆ ಬಿಲಾವಲ್ ಪಕ್ಷದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
"ಪಿಟಿಐ ಸಂಸ್ಥಾಪಕ ಇಮ್ರಾನ್ ಖಾನ್ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಮಾತುಕತೆಗೆ ಸಿದ್ಧರಿದ್ದರೆ ಅದು ಸಕಾರಾತ್ಮಕ ವಿಷಯ" ಎಂದು ಹಿರಿಯ ಪಿಪಿಪಿ ನಾಯಕ ಖುರ್ಷಿದ್ ಶಾ ಬಲೂಚಿಸ್ತಾನದ ಪ್ರಾಂತೀಯ ರಾಜಧಾನಿ ಕ್ವೆಟ್ಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
"ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಯಾವಾಗಲೂ ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಮತ್ತು ಅಗತ್ಯವಿದ್ದರೆ ಪಿಪಿಪಿ ಇದರಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲಿದೆ" ಎಂದು ಶಾ ಹೇಳಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಪ್ರಸ್ತುತ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸರ್ಕಾರದ ವಿರುದ್ಧ ಪಿಟಿಐನ ಕಠಿಣ ನಿಲುವು ತಳೆದಿದೆ. ಸದ್ಯ ರಾಜಕೀಯ ಅಸ್ಥಿರತೆಯ ಮಧ್ಯೆ ಖಾನ್ ಅವರ ಪಕ್ಷದೊಂದಿಗೆ ಮಾತುಕತೆ ನಡೆಸಲು ಪಿಪಿಪಿ ಸಿದ್ಧವಾಗಿದೆ ಎಂದು ಹೇಳಿರುವುದು ಗಮನಾರ್ಹ.
ಫೆಬ್ರವರಿ 8 ರ ಚುನಾವಣೆಯ ನಂತರ ಇಮ್ರಾನ್ ಖಾನ್ ಅವರ ಪಕ್ಷ ಹೊರತುಪಡಿಸಿದ ಎರಡು ಪಕ್ಷಗಳು ಪಕ್ಷಗಳು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ ನಂತರ ದೇಶದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದೆ.
ಪಾಕಿಸ್ತಾನದಲ್ಲಿನ ಪ್ರಸ್ತುತ ಸರ್ಕಾರವನ್ನು "ಫಾರ್ಮ್ -47 ಸರ್ಕಾರ" ಎಂದು ಜರಿದ ಖಾನ್ ಅವರ ಪಕ್ಷವು ಈ ಹಿಂದೆ ಮಾತುಕತೆಯನ್ನು ತಿರಸ್ಕರಿಸಿತ್ತು. ಬದಲಿಗೆ ಮಿಲಿಟರಿ ವ್ಯವಸ್ಥೆಯೊಂದಿಗೆ ಮಾತುಕತೆಗೆ ಆದ್ಯತೆ ವ್ಯಕ್ತಪಡಿಸಿತ್ತು. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಡಿಜಿ ಐಎಸ್ಐ) ಅವರೊಂದಿಗೆ ಮಾತುಕತೆಗೆ ಪಿಟಿಐ ಆದ್ಯತೆ ನೀಡುವುದಾಗಿ ಏಪ್ರಿಲ್ನಲ್ಲಿ ಪಿಟಿಐನ ಶೆಹ್ರ್ಯಾರ್ ಅಫ್ರಿದಿ ಹೇಳಿದ್ದರು.
ಕಳೆದ ತಿಂಗಳು, ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅವರು ಸರ್ಕಾರದೊಂದಿಗೆ ಚರ್ಚಿಸಲು ಇಮ್ರಾನ್ ಖಾನ್ ಅನುಮೋದನೆ ನೀಡಿದ್ದಾರೆ ಎಂದು ದೃಢಪಡಿಸಿದ್ದರು. ಹಾಗೆಯೇ ಖೈಬರ್ ಪಖ್ತುನಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ಮತ್ತು ಖಾನ್ ಅವರ ಸಹೋದರಿ ಅಲೀಮಾ ಖಾನ್ ಅವರು ದೇಶದ ಪ್ರಗತಿಗಾಗಿ ದೇಶದ ಸಂಸ್ಥೆಗಳು ತಟಸ್ಥ ನಿಲುವು ಹೊಂದಿರಬೇಕೆಂದು ಕರೆ ನೀಡಿದ್ದರು.
ಇದನ್ನೂ ಓದಿ : ಆಗಸ್ಟ್ನಲ್ಲಿ ಉಕ್ರೇನ್ಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ: ಯುದ್ಧ ನಿಲ್ಲಿಸಲು ನಡೆಯಲಿದೆಯಾ ಮಾತುಕತೆ? - PM Modi visit Ukraine