ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತದ ನೆರೆಯ ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದೆ. ಬಾಂಗ್ಲಾದೇಶದಲ್ಲಿ ಈಗಾಗಲೇ ಶೇಕ್ ಹಸೀನಾ ಅವರ ಸರ್ಕಾರ ಪತನವಾಗಿದೆ. ಇಂಥದ್ದೇ ಮಾದರಿಯ ಹೋರಾಟ ಪಾಕಿಸ್ತಾನದಲ್ಲೂ ನಡೆಯುತ್ತಿದೆ. ಆಡಳಿತಾರೂಢ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಇಡಲಾಗಿದೆ. ಅವರ ವಿರುದ್ಧ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ವಿಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ಪ್ರಧಾನಿ ಷರೀಫ್ ಅವರು ರಾಜೀನಾಮೆ ನೀಡಬೇಕು ಎಂದು ಆರೋಪಿಸಿ ಪಿಟಿಐ ಕಾರ್ಯಕರ್ತರು ಕೆಲ ದಿನಗಳಿಂದ ಚಳವಳಿ ಆರಂಭಿಸಿದ್ದಾರೆ.
ಎರಡು ದಿನಗಳ ಹಿಂದೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು, ನಾಯಕರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ. ಇದರಿಂದ ಹೋರಾಟ ಮತ್ತಷ್ಟು ಕಾವು ಪಡೆದಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಕ್ಷವು ಆರೋಪಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹ: ಸಾರ್ವಜನಿಕ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಇಸ್ಲಾಮಾಬಾದ್‌ನಲ್ಲಿ ತನ್ನ ನಾಯಕರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ, ಬಂಧನವನ್ನು ವಿರೋಧ ಪಕ್ಷವು ಬಲವಾಗಿ ಖಂಡಿಸಿತು. ಪಿಟಿಐ ಪಕ್ಷದ ಹಿರಿಯ ನಾಯಕ ಅಸದ್ ಕೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಪಕ್ಷದ ನಾಯಕರು ಕೋರ್ಟ್ನಲ್ಲಿ ಕಾನೂನು ಹೋರಾಟ ಮುಂದುವರೆಸುವುದರ ಜೊತೆಗೆ ಬೀದಿಗಿಳಿದು ಹೋರಾಡುತ್ತೇವೆ. ಬಂಧನಕ್ಕೊಳಗಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈಗಿನ ಸರ್ಕಾರ ಕಾನೂನುಬಾಹಿರವಾಗಿ ಅಧಿಕಾರ ಪಡೆದುಕೊಂಡಿದೆ. ಹೀಗಾಗಿ ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು. ಇಸ್ಲಾಮಾಬಾದ್‌ನಲ್ಲಿ ನಡೆದ ರ್‍ಯಾಲಿಗೆ ಅಡ್ಡಿಪಡಿಸಿದ್ದಕ್ಕಾಗಿ ಪೊಲೀಸ್ ಮುಖ್ಯಸ್ಥ ಮತ್ತು ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದಲ್ಲಿ ಆಗಿದ್ದೇನು?: 1971 ಕ್ಕೂ ಮೊದಲು ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಸರ್ಕಾರವನ್ನೇ ಪತನಗೊಳಿಸಿತು. ಮೊದಲು ವಿದ್ಯಾರ್ಥಿಗಳಿಂದ ಆರಂಭವಾದ ಹೋರಾಟ ನಾಗರಿಕರ ದಂಗೆಯಾಗಿ ಮಾರ್ಪಟ್ಟಿತು. ಜನರು ಸಂಸತ್ ಮತ್ತು ಪ್ರಧಾನಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು. ಇದರಿಂದ ಬೆದರಿದ ಪ್ರಧಾನಿಯಾಗಿದ್ದ ಶೇಕ್ ಹಸೀನಾ ಅವರು ದೇಶದಿಂದ ಪಲಾಯನ ಮಾಡಿದ್ದರು.
ಇದಾದ ಬಳಿಕ ಪ್ರತಿಭಟನಾಕಾರರು ಸೇನಾ ಮಧ್ಯಸ್ತಿಕೆಯಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಒಪ್ಪಿದರು. ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮದ್ ಯೂನುಸ್ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ದೇಶದಿಂದ ಪರಾರಿಯಾಗಿರುವ ಶೇಕ್ ಹಸೀನಾ ಅವರ ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷನಾದರೆ ಉಕ್ರೇನ್ ಯುದ್ಧ ನಿಲ್ಲಿಸುವೆನೆಂದ ಟ್ರಂಪ್: ನಿಮ್ಮ ಕೈಲಾಗದು ಎಂದ ಹ್ಯಾರಿಸ್ - US Presidential Debate