ಇಸ್ಲಾಮಾಬಾದ್/ಕಾಬೂಲ್: ಅಫ್ಘಾನಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇದು ಉಭಯ ರಾಷ್ಟ್ರಗಳ ನಡುವೆ ಭಾರಿ ತಿಕ್ಕಾಟಕ್ಕೆ ಕಾರಣವಾಗಿದೆ.
ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 8 ನಾಗರಿಕರು ಹತರಾಗಿದ್ದಾರೆ ಎಂದು ಆಫ್ಘನ್ನ ತಾಲಿಬಾನ್ ಸರ್ಕಾರ ಹೇಳಿದೆ. ಪಾಕಿಸ್ತಾನ ಇದನ್ನು ನಿರಾಕರಿಸಿದ್ದು, ಮೋಸ್ಟ್ ವಾಂಟೆಡ್ ಉಗ್ರ ಸೇರಿದಂತೆ 8 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೆ ನೀಡಿದೆ. ಪಾಕಿಸ್ತಾನದ ಗಡಿಯ ಖೈಬರ್ ಪಖ್ತುಂಖ್ವಾ ಪ್ರದೇಶದ ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ಈ ದಾಳಿಗಳು ನಡೆದಿವೆ ಎಂದು ಅಫ್ಘಾನಿಸ್ತಾನದ ಸರ್ಕಾರಿ ಅಧಿಕಾರಿ ಸೋಮವಾರ ದೃಢಪಡಿಸಿದ್ದಾರೆ. ನೆರೆ ರಾಷ್ಟ್ರದ ವಿಮಾನಗಳು ಭಾನುವಾರ ಬೆಳಗ್ಗೆ 3 ಗಂಟೆ ಸುಮಾರಿನಲ್ಲಿ ಸೀಮೆ ದಾಟಿ ಬಂದು ವಾಯುದಾಳಿ ನಡೆಸಿವೆ. ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಮೃತ 8 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ತಾಲಿಬಾನ್ ತಿಳಿಸಿದೆ.
ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ ತಾಲಿಬಾನ್, ಪಕ್ಟಿಕಾದಲ್ಲಿ ಮನೆ ಕುಸಿದು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದರೆ, ಖೋಸ್ಟ್‌ನಲ್ಲಿ ಒಂದು ಮನೆ ಕುಸಿತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದಿದೆ.
ಪಾಕಿಸ್ತಾನನದಲ್ಲಿನ ಸಮಸ್ಯೆಗಳು ಮತ್ತು ಹಿಂಸಾತ್ಮಕ ದಾಳಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿ ಅಲ್ಲಿನ ಸರ್ಕಾರ ವೃಥಾ ಅಫ್ಘಾನಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದೆ. ಇಂತಹ ಭೀಕರ ಕೃತ್ಯಗಳಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇನ್ನು, ಈ ದಾಳಿಯು ಪಾಕಿಸ್ತಾನದ ಉತ್ತರ ವಜೀರಿಸ್ತಾನದ ಭದ್ರತಾ ಪಡೆಗಳ ಪೋಸ್ಟ್‌ನ ಮೇಲೆ ಭಯೋತ್ಪಾದಕ ದಾಳಿ ನಡೆದ ಕೆಲವೇ ದಿನಗಳಲ್ಲಿ ಸಂಭವಿಸಿದೆ. 7 ಸೈನಿಕರ ಪ್ರಾಣಾಹುತಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರತಿಜ್ಞೆ ಮಾಡಿದ ಬಳಿಕ ಈ ವೈಮಾನಿಕ ದಾಳಿ ನಡೆಸಲಾಗಿದೆ.
ಪಾಕಿಸ್ತಾನ ಪ್ರತಿಕ್ರಿಯೆ: ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನಾ ಪಡೆಗಳು ವಾಂಟೆಡ್ ಭಯೋತ್ಪಾದಕ ಕಮಾಂಡರ್ ಸೇರಿದಂತೆ ಎಂಟು ಉಗ್ರರನ್ನು "ನರಕಕ್ಕೆ ಕಳುಹಿಸಿವೆ" ಎಂದು ಪಾಕಿಸ್ತಾನ ದಾಳಿಯನ್ನು ಸಮರ್ಥಿಸಿಕೊಂಡಿದೆ.
ಮಾರ್ಚ್ 17-18 ರ ರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು ಎಚ್‌ವಿಟಿ ಭಯೋತ್ಪಾದಕ ಕಮಾಂಡರ್ ಸೆಹ್ರಾ ಜನನ್ ಸೇರಿದಂತೆ 8 ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ನೆರೆ ರಾಷ್ಟ್ರದಿಂದ ಭಯೋತ್ಪಾದನೆಯ ಬೆದರಿಕೆ ನಿರ್ಮೂಲನೆ ಮಾಡಲು ನಿರ್ಧರಿಸಿ, ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.
ಅಫ್ಘಾನಿಸ್ತಾನದ ನೆಲದಲ್ಲಿ ಪಾಕಿಸ್ತಾನಿ ಸೇನಾ ಪಡೆಗಳ ವಿಮಾನಗಳು ವಾಯುದಾಳಿ ನಡೆಸಿವೆ. ಪಾಕಿಸ್ತಾನದ ಗಡಿ ಭಾಗದಲ್ಲಿರುವ ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳು ವೈಮಾನಿಕ ದಾಳಿಗೆ ಒಳಗಾಗಿವೆ. ಉಗ್ರರನ್ನು ಹರಣ ಮಾಡಲಾಗಿದೆ ಎಂದು ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 31,645ಕ್ಕೇರಿದ ಪ್ಯಾಲೆಸ್ಟೈನಿಯರ ಸಾವಿನ ಸಂಖ್ಯೆ: ಕದನವಿರಾಮಕ್ಕೆ ಮೂಡದ ಒಮ್ಮತ