ವಾಷಿಂಗ್ಟನ್ ಡಿಸಿ: "ಭಾರತ ಮತ್ತು ಪಾಕಿಸ್ತಾನ ನಡುವಿನ ನೇರ ಚರ್ಚೆಯನ್ನು ಅಮೆರಿಕ ಬೆಂಬಲಿಸುತ್ತದೆ. ಆದರೆ ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಸ್ವರೂಪವನ್ನು ಉಭಯ ರಾಷ್ಟ್ರಗಳೇ ನಿರ್ಧರಿಸಬೇಕೇ ಹೊರತು ಅಮೆರಿಕ ಅಲ್ಲ" ಎಂದು ಯುಎಸ್ ಸ್ಟೇಟ್ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಗುರುವಾರ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅಭಿನಂದಿಸಿದ್ದರು. ಈ ಬಗ್ಗೆ ಹಾಗೂ ಎಭಯ ರಾಷ್ಟ್ರಗಳ ಪ್ರಧಾನಿಗಳು ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ತಜ್ಞರ ವಲಯದಿಂದ ಬರುತ್ತಿರುವ ಮಾತುಗಳ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಭಾರತ ಮತ್ತು ಪಾಕಿಸ್ತಾನದೊಂದಿಗಿನ ನಮ್ಮ ಪ್ರಮುಖ ಸಂಬಂಧಗಳನ್ನು ನಾವು ಗೌರವಿಸುತ್ತೇವೆ. ನಾವು ಹೇಳಿದಂತ ಭಾರತ ಮತ್ತು ಪಾಕಿಸ್ತಾನದ ನಡುವಿನ ನೇರ ಚರ್ಚೆಯನ್ನು ನಾವು ಬೆಂಬಲಿಸುತ್ತೇವೆ. ಆದರೆ ಅದರ ವೇಗ, ವ್ಯಾಪ್ತಿ ಮತ್ತು ಪಾತ್ರವನ್ನು ಆ ಎರಡು ದೇಶಗಳು ನಿರ್ಧರಿಸಬೇಕು. ಅಮೆರಿಕ ಮತ್ತು ಪಾಕಿಸ್ತಾನ ಎರಡೂ ಪ್ರಾದೇಶಿಕ ಭದ್ರತಾ ಬೆದರಿಕೆಗಳನ್ನು ಪರಿಹರಿಸುವ ಸಾಮಾನ್ಯ ಗುರಿಯನ್ನು ಹೊಂದಿವೆ.
"ನಾವು ನಮ್ಮ ಉನ್ನತ ಮಟ್ಟದ ಭಯೋತ್ಪಾದನಾ ನಿಗ್ರಹ ಸಂವಾದದ ಮೂಲಕ ಭದ್ರತೆಯ ಕುರಿತು ಪಾಕಿಸ್ತಾನದೊಂದಿಗೆ ಪಾಲುದಾರರಾಗಿದ್ದೇವೆ, ಇದರಲ್ಲಿ ಹಲವಾರು ಭಯೋತ್ಪಾದನಾ ನಿಗ್ರಹ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು ಸೇರಿವೆ ಮತ್ತು ನಾವು ಅಮೆರಿಕ-ಪಾಕಿಸ್ತಾನ ಮಿಲಿಟರಿ-ಮಿಲಿಟರಿ ಕಾರ್ಯ ಸರಣಿಯನ್ನು ಬೆಂಬಲಿಸುತ್ತೇವೆ" ಎಂದು ಮಿಲ್ಲರ್ ಹೇಳಿದರು.
ಜೂನ್ 10 ರಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ್ದರು. ಎಕ್ಸ್ನಲ್ಲಿ "ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದರು. ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, "ನಿಮ್ಮ ಶುಭ ಹಾರೈಕೆಗಳಿಗಾಗಿ @cmshehbaz ಅವರಿಗೆ ಧನ್ಯವಾದಗಳು" ಎಂದು ಧನ್ಯವಾದವನ್ನು ಅರ್ಪಿಸಿದ್ದರು.
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಕೂಡ, ಸತತ ಮೂರನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದರು. "ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮೋದಿ ಜಿ (@narendramodi) ಅವರಿಗೆ ನನ್ನ ಹಾರ್ದಿಕ ಶುಭಾಶಯಗಳು. ಇತ್ತೀಚಿನ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಯಶಸ್ಸು ನಿಮ್ಮ ನಾಯಕತ್ವದಲ್ಲಿ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನಾವು ದ್ವೇಷವನ್ನು ಭರವಸೆಯ ಮೂಲಕ ಬದಲಾಯಿಸೋಣ ಮತ್ತು ದಕ್ಷಿಣ ಏಷ್ಯಾದ ಎರಡು ಶತಕೋಟಿ ಜನರ ಭವಿಷ್ಯವನ್ನು ರೂಪಿಸುವ ಅವಕಾಶವನ್ನು ಪಡೆದುಕೊಳ್ಳೋಣ." ಎಂದು ನವಾಜ್ ಷರೀಫ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು, "@NawazSharifMNS ನಿಮ್ಮ ಸಂದೇಶವನ್ನು ಶ್ಲಾಘಿಸುತ್ತೇನೆ. ಭಾರತದ ಜನರು ಯಾವಾಗಲೂ ಶಾಂತಿ, ಭದ್ರತೆ ಮತ್ತು ಪ್ರಗತಿಪರ ಆಲೋಚನೆಗಳ ಪರವಾಗಿಯೇ ನಿಂತಿದ್ದಾರೆ. ನಮ್ಮ ಜನರ ಯೋಗಕ್ಷೇಮ ಮತ್ತು ಭದ್ರತೆಯನ್ನು ಮುನ್ನಡೆಸುವುದು ಯಾವಾಗಲೂ ನಮ್ಮ ಆದ್ಯತೆಯಾಗಿರುತ್ತದೆ" ಎಂದು ಹೇಳಿದ್ದರು.