ನ್ಯೂಯಾರ್ಕ್( ಅಮೆರಿಕ): ನ್ಯೂಯಾರ್ಕ್‌ನ ಬ್ರಾಂಕ್ಸ್ ಕಂಟ್ರಿಯಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿರುವುದರ ಬಗ್ಗೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ದಾಳಿಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ.
ವರದಿಗಳ ಪ್ರಕಾರ, ಸೋಮವಾರ ಸಂಜೆ 4:30 ರ ಸುಮಾರಿಗೆ (ಸ್ಥಳೀಯ ಸಮಯ) ಅಧಿಕಾರಿಗಳು ಮೌಂಟ್ ಈಡನ್ ಅವೆನ್ಯೂ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದೆವು. ಈ ವೇಳೆ ಆರು ಮಂದಿ ಗುಂಡು ಹಾರಿಸಿರುವುದು ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ (NYPD) ಟ್ರಾನ್ಸಿಟ್ ಮುಖ್ಯಸ್ಥ ಮೈಕೆಲ್ ಎಂ. ಕೆಂಪರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಗುಂಡಿನ ದಾಳಿಯ ನಂತರ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಮತ್ತು ಸೇಂಟ್ ಬರ್ನಾಬಾಸ್ ಆಸ್ಪತ್ರೆಯಲ್ಲಿ 34 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲಿನೊಳಗೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಬಳಿಕ ಸಬ್ವೇ ಸ್ಟೇಷನ್ನಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿಕೋರರ ಗುರುತು ಪತ್ತೆಯಾಗಿಲ್ಲ ಎಂದು ಕೆಂಪರ್ ಹೇಳಿದರು.
ಓದಿ: ಟೆಕ್ಸಾಸ್ ಚರ್ಚ್‌ನಲ್ಲಿ ಗುಂಡಿನ ದಾಳಿ: ಮಹಿಳಾ ಶೂಟರ್ ಹತ್ಯೆ, 5 ವರ್ಷದ ಮಗು ಸೇರಿ ಇಬ್ಬರಿಗೆ ಗಾಯ
ಇನ್ನು ಭಾನುವಾರ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಚರ್ಚ್ವೊಂದರಲ್ಲಿ ಮಹಿಳೆಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಗು ಮತ್ತು ವೃದ್ಧ ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಜನರಿಗೆ ಯಾವುದೇ ಹೆಚ್ಚಿನ ಅಪಾಯವಾಗಿಲ್ಲ ಎಂದು ಅಲ್ಲಿನ ಪೊಲೀಸರು ಹೇಳಿದ್ದರು. ಇವಾಂಜೆಲಿಕಲ್ ಕ್ರಿಶ್ಚಿಯನ್ ಪಾದ್ರಿ ಜೋಯಲ್ ಒಸ್ಟೀನ್ ಅವರು ನಡೆಸುತ್ತಿದ್ದ ಮೆಗಾಚರ್ಚ್ ಇದಾಗಿತ್ತು.
ಭಾನುವಾರ ಮಧ್ಯಾಹ್ನ ಚರ್ಚ್ ಪ್ರವೇಶಿಸಿದ್ದ ಮಹಿಳೆ ಗುಂಡಿನ ದಾಳಿ ನಡೆಸಿದ್ದಳು, ಸಾಯುವ ಮೊದಲು ಮಹಿಳೆ ತನ್ನ ಬಳಿ ಬಾಂಬ್ ಇದೆ ಎಂದು ಬೆದರಿಕೆ ಕೂಡಾ ಹಾಕಿದಳು. ಅವಳನ್ನು ಹಿಡಿಯಲು ಆಗಮಿಸುತ್ತಿದ್ದಂತೆ ರಾಸಾಯನಿಕ ವಸ್ತುವನ್ನು ಸಿಂಪಡಿಸಿದ್ದಳು. ಆದರೆ ಆ ರಾಸಾಯನಿಕ ವಸ್ತು ಯಾವುದು ಎಂಬುದು ಆಗ ತಿಳಿದು ಬಂದಿರಲಿಲ್ಲ. ಈ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಮೆರಿಕದಲ್ಲಿ ಒಂದಿಲ್ಲೊಂದು ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ದಾಳಿಕೋರರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಲೇ ಇದ್ದಾರೆ. ಆದರೂ ಗುಂಡಿನ ದಾಳಿಗಳು ಮುಂದುವರೆಯುತ್ತಲೇ ಇವೆ.