ದುಬೈ : ಇರಾನ್ನ ವಾಯುವ್ಯ ಭಾಗದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನರಾದ ನಂತರ ಇರಾನ್ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರನ್ನು ಇಸ್ಲಾಮಿಕ್ ಗಣರಾಜ್ಯದ ಹಂಗಾಮಿ ಅಧ್ಯಕ್ಷರಾಗಿ ಸೋಮವಾರ ನೇಮಕ ಮಾಡಲಾಗಿದೆ.
ಇರಾನ್ನ ಇತರ ಸಾಂಪ್ರದಾಯಿಕ ಶಿಯಾ ರಾಜಕಾರಣಿಗಳಿಗೆ ಹೋಲಿಸಿದರೆ 68 ವರ್ಷದ ಮೊಖ್ಬರ್ ತೀರಾ ಬಹಿರಂಗವಾಗಿ ಕಾಣಿಸಿಕೊಂಡವರಲ್ಲ. ಆದರೆ, ರೈಸಿ ಅವರ ಸಾವಿನಿಂದಾಗಿ ಮೊಖ್ಬರ್ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಸ್ತುತ ಅಧ್ಯಕ್ಷರ ಸಾವಿನ ನಂತರ 50 ದಿನಗಳಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯುವುದು ಕಡ್ಡಾಯವಾಗಿದೆ. ಅಲ್ಲಿಯವರೆಗೆ ಮೊಖ್ಬರ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ರೈಸಿ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ದೇಶದ ಹಂಗಾಮಿ ಅಧ್ಯಕ್ಷರಾಗಿ ಮೊಖ್ಬರ್ ಅವರನ್ನು ನೇಮಿಸಿದ್ದಾರೆ. ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಮೊಖ್ಬರ್ ದೇಶದ ಅಧಿಕಾರ ರಚನೆಯಲ್ಲಿ, ವಿಶೇಷವಾಗಿ ಅದರ ಧಾರ್ಮಿಕ ಸಂಸ್ಥೆಗಳು, ದತ್ತಿ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿಯವರ ಎಕ್ಸಿಕ್ಯೂಷನ್ ಆಫ್ ಇಮಾಮ್ ಖೊಮೇನಿಸ್ ಆರ್ಡರ್ ಅಥವಾ ಇಐಕೆಒ (EIKO) ಎಂದು ಕರೆಯಲ್ಪಡುವ ಬೋನ್ಯಾಡ್ಗಳನ್ನು ಮೊಖ್ಬೆರ್ ನಿರ್ವಹಣೆ ಮಾಡಿದ್ದಾರೆ. ಬೋನ್ಯಾಡ್ ಇವು ಇರಾನ್ನ ಚಾರಿಟಬಲ್ ಟ್ರಸ್ಟ್ಗಳಾಗಿದ್ದು, ಅವು ಇರಾನ್ನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಇಂಧನ, ದೂರಸಂಪರ್ಕ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಇರಾನಿನ ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಪಾಲನ್ನು ಹೊಂದಿರುವ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನೇರ ಮೇಲ್ವಿಚಾರಣೆಯಲ್ಲಿ ಬೋನ್ಯಾಡ್ ಸಂಸ್ಥೆಯು ಶತಕೋಟಿ ಡಾಲರ್ ಆಸ್ತಿಗಳನ್ನು ನಿರ್ವಹಣೆ ಮಾಡಿದೆ ಎಂದು ಯುಎಸ್ ಖಜಾನೆ ತಿಳಿಸಿದೆ.
ಮೊಖ್ಬರ್ ಈ ಹಿಂದೆ ಬ್ಯಾಂಕಿಂಗ್ ಮತ್ತು ದೂರಸಂಪರ್ಕ ವಲಯದಲ್ಲಿ ಕೆಲಸ ಮಾಡಿದ್ದರು. ಅವರು ದೇಶದ ಮೆಗಾ - ಯೋಜನೆಗಳು ಮತ್ತು ವ್ಯವಹಾರಗಳನ್ನು ನಿರ್ವಹಿಸುವ ಪ್ರಮುಖ ಸಂಸ್ಥೆಯಾದ ಮೊಸ್ಟಾಝಾಫಾನ್ ಫೌಂಡೇಶನ್ನಲ್ಲಿಯೂ ಕೆಲಸ ಮಾಡಿದ್ದಾರೆ. ಅಲ್ಲಿದ್ದಾಗ ಅವರು ಮೊಬೈಲ್ ಫೋನ್ ಸೇವಾ ಪೂರೈಕೆದಾರರಾದ ಟರ್ಕ್ ಸೆಲ್ ಮತ್ತು ದಕ್ಷಿಣ ಆಫ್ರಿಕಾದ ಎಂಟಿಎನ್ ನಡುವೆ ಇರಾನಿನ ಮಾರುಕಟ್ಟೆಗೆ ಪ್ರವೇಶಿಸುವ ಬಗ್ಗೆ ನಡೆದ ಕಾನೂನು ವಿವಾದದಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ಎಂಟಿಎನ್ ಇರಾನ್ನಲ್ಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಅನುಮತಿ ಪಡೆಯಿತು.
ಅಂತರರಾಷ್ಟ್ರೀಯ ಕಾನೂನಿನಲ್ಲಿ ಡಾಕ್ಟರೇಟ್ ಪಡೆದಿರುವ ಮೊಖ್ಬರ್, ದೇಶದ ತೈಲ ಉದ್ಯಮದ ಮೇಲೆ ಪಾಶ್ಚಿಮಾತ್ಯ ನಿರ್ಬಂಧಗಳ ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಇರಾನಿನ ಮಾಧ್ಯಮ ವರದಿಗಳು ಹೇಳಿವೆ.
ಮೊಖ್ಬರ್ ಸೆಪ್ಟೆಂಬರ್ 1, 1955 ರಂದು ಇರಾನ್ನ ನೈಋತ್ಯ ಖುಜೆಸ್ತಾನ್ ಪ್ರಾಂತ್ಯದ ಡೆಜ್ಫುಲ್ನಲ್ಲಿ ಧಾರ್ಮಿಕ ಕುಟುಂಬವೊಂದರಲ್ಲಿ ಜನಿಸಿದರು. ಅವರು 1980 ರ ದಶಕದ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ರೆವಲ್ಯೂಷನರಿ ಗಾರ್ಡ್ನ ವೈದ್ಯಕೀಯ ದಳದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಹೆಲಿಕಾಪ್ಟರ್ ಪತನ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿ 9 ಮಂದಿ ದುರ್ಮರಣ - Iran President helicopter crash