ಮಾಲೆ: ಮಾಲ್ಡೀವ್ಸ್ ಸಂಸತ್ತಿನ ಮುಖ್ಯ ಪ್ರತಿಪಕ್ಷವಾಗಿರುವ ಎಂಡಿಪಿ, ದೇಶದ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ದೋಷಾರೋಪಣಾ ನಿರ್ಣಯ ಮಂಡಿಸಲು ಸಜ್ಜಾಗಿದೆ. ಈ ವಿಚಾರವನ್ನು ಪಕ್ಷವು ಸೋಮವಾರ ತಿಳಿಸಿದೆ. ಮುಯಿಝು ಸಂಪುಟದ ನಾಲ್ವರು ಸದಸ್ಯರ ಅನುಮೋದನೆ ವಿಚಾರವಾಗಿ ಸಂಸತ್ತಿನಲ್ಲಿ ಸರ್ಕಾರದ ಪರ ಇರುವ ಹಾಗು ವಿಪಕ್ಷ ಸದಸ್ಯರ ನಡುವೆ ನಡೆದ ಹೊಡೆದಾಟದ ಒಂದು ದಿನದ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.
ಸಚಿವ ಸಂಪುಟಕ್ಕೆ ಮೂವರು ಸದಸ್ಯರನ್ನು ಮುಯಿಝ ಮರುನೇಮಕ ಮಾಡಿರುವ ಬೆಳವಣಿಗೆಯ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಇದಕ್ಕೂ ಮುನ್ನ ಈ ಸದಸ್ಯರು ಸಂಪುಟ ಸೇರುವುದಕ್ಕೆ ಸಂಸತ್ತಿನಲ್ಲಿ ನಡೆದ ಮತದಾನದ ಮೂಲಕ ವಿರೋಧ ವ್ಯಕ್ತಪಡಿಸಲಾಗಿತ್ತು. ಏಕೆಂದರೆ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಸಂಸತ್ತಿನಲ್ಲಿ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ಕಾರಣಕ್ಕೆ ಮುಯಿಜು ನೇಮಕವನ್ನು ಎಂಡಿಪಿ ಕಟುವಾಗಿ ವಿರೋಧಿಸುತ್ತಿದೆ.
ಇದೇ ವಿಚಾರವಾಗಿ ಭಾನುವಾರ ಸರ್ಕಾರದ ಪರವಾಗಿರುವ ಸಂಸದರು ಮತ್ತು ವಿರೋಧ ಪಕ್ಷಗಳ ಸಂಸದರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿ ಭಾರಿ ಸಂಘರ್ಷವೇ ನಡೆದಿತ್ತು.
ಮುಯಿಝು (45) ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತಸ್ನೇಹಿ ನಾಯಕ ಇಬ್ರಾಹಿಂ ಮೊಹಮ್ಮದ್ ಸೋಲಿ ವಿರುದ್ಧ ಗೆದ್ದಿದ್ದರು.
ಇದೀಗ ಎಂಡಿಪಿ ಇತರ ದಿ ಡೆಮಾಕ್ರೇಟ್ಸ್ ಸದಸ್ಯರ ಜೊತೆಗೆ ಮುಯಿಜಿ ವಿರುದ್ಧ ದೋಷಾರೋಪಣಾ ನಿರ್ಣಯಕ್ಕೆ ಬೇಕಾಗುವ ಸಹಿ ಸಂಗ್ರಹ ಮಾಡಿದೆ. ಆದರೆ ಅದನ್ನು ಸಂಸತ್ತಿನಲ್ಲಿ ಮಂಡನೆ ಮಾಡಿಲ್ಲ ಎಂದು ಮಾಲ್ಡೀವ್ಸ್ ಮಾಧ್ಯಮವೊಂದು ವರದಿ ಮಾಡಿದೆ.
ಮುಯಿಝು ವಿರುದ್ಧ ದೋಷಾರೋಪಣಾ ನಿರ್ಣಯ ಮಂಡಿಸುವುದನ್ನು ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್(ಪಿಪಿಎಮ್), ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್(ಪಿಎನ್‌ಸಿ) ವಿರೋಧಿಸಿದೆ. ನಾವು ಯಾವುದೇ ಕಾರಣಕ್ಕೂ ನಿರ್ಣಯ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮಾಲ್ಡೀವ್ಸ್ ಸಂಸತ್ತು ಒಟ್ಟು 80 ಸದಸ್ಯರನ್ನು ಹೊಂದಿದೆ. ಈ ಪೈಕಿ ದಿ ಡೆಮಾಕ್ರೇಟ್ಸ್ (ಡಿಇಎಮ್) 13, ಆಡಳಿತಾರೂಢ ಪಿಪಿಎಂ ಮತ್ತು ಪಿಎನ್‌ಸಿ, ಮಾಲ್ಡೀವ್ಸ್ ಪ್ರೊಗ್ರೆಸ್ಸಿವ್ ಪಾರ್ಟಿ 2, ಪೀಪಲ್ಸ್ ನ್ಯಾಷನಲ್ ಪಾರ್ಟಿ 13 ಸದಸ್ಯರನ್ನು ಹೊಂದಿದೆ. ಮೂವರು ಸ್ವತಂತ್ರ ಸದಸ್ಯರಿದ್ದಾರೆ.
ಇದನ್ನೂ ಓದಿ: ಜೋರ್ಡಾನ್ನಲ್ಲಿ ಅಮೆರಿಕ ಸೈನಿಕರ ಸಾವಿಗೆ ಬೈಡನ್ ದೌರ್ಬಲ್ಯವೇ ಕಾರಣ: ಟ್ರಂಪ್