ಸಿಯೋಲ್ : ಉತ್ತರ ಕೊರಿಯಾ ವಿರೋಧಿ ಬರಹಗಳ ಪ್ರಚಾರ ಕರಪತ್ರಗಳನ್ನು ದೇಶದೊಳಗೆ ಕಳುಹಿಸುವುದು ಮತ್ತು ಗಡಿಯಲ್ಲಿ ಲೌಡ್ ಸ್ಪೀಕರ್ ಮೂಲಕ ಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ದಕ್ಷಿಣ ಕೊರಿಯಾವು ದೊಡ್ಡ ಮಟ್ಟದ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಅವರ ಸಹೋದರಿ ಎಚ್ಚರಿಸಿದ್ದಾರೆ.
ಉತ್ತರ ಕೊರಿಯಾವು ಪದೇ ಪದೇ ಕಸ ತುಂಬಿದ ಬಲೂನ್ಗಳನ್ನು ಕಳುಹಿಸುತ್ತಿರುವುದಕ್ಕೆ ಪ್ರತೀಕಾರವಾಗಿ ದಕ್ಷಿಣ ಕೊರಿಯಾವು ಆರು ವರ್ಷಗಳಲ್ಲಿ ಮೊದಲ ಬಾರಿಗೆ ಉತ್ತರ ಕೊರಿಯಾದ ವಿರುದ್ಧ ಧ್ವನಿವರ್ಧಕ ಪ್ರಸಾರವನ್ನು ಪುನಾರಂಭಿಸಿದ ನಂತರ ಕಿಮ್ ಯೋ-ಜಾಂಗ್ ಈ ಹೇಳಿಕೆ ನೀಡಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಗಡಿ ಉದ್ದಕ್ಕೂ ಪ್ರಚೋದನೆ ಉಂಟು ಮಾಡಲು ಕರಪತ್ರ ಹಂಚುವಿಕೆ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ದಕ್ಷಿಣ ಕೊರಿಯಾವು ಮುಂದುವರಿಸಿದರೆ ಅದು ನಿಸ್ಸಂದೇಹವಾಗಿ ಉತ್ತರ ಕೊರಿಯಾದಿಂದ ಹೊಸ ಪ್ರತಿದಾಳಿಗೆ ಸಾಕ್ಷಿಯಾಗಲಿದೆ" ಎಂದು ಕಿಮ್ ಭಾನುವಾರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಉತ್ತರ ಕೊರಿಯಾವು ಗಡಿಯುದ್ದಕ್ಕೂ 1,400 ಬಲೂನ್ಗಳಲ್ಲಿ ಸುಮಾರು 7.5 ಟನ್ ತ್ಯಾಜ್ಯ ವಸ್ತುಗಳನ್ನು ತುಂಬಿಸಿ ಕಳುಹಿಸಿದೆ ಎಂದು ಕಿಮ್ ಹೇಳಿದ್ದಾರೆ. ಆದರೆ, ಇದರಲ್ಲಿನ ಕಾಗದದ ಚೂರುಗಳು ಯಾವುದೇ ರಾಜಕೀಯ ಬರಹಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾ ಗಡಿಯೊಳಗೆ ಬಲೂನ್ ಕಳುಹಿಸುವುದನ್ನು ನಿಲ್ಲಿಸಲು ಉತ್ತರ ಕೊರಿಯಾ ಯೋಜಿಸಿದೆ. ಆದರೆ ದಕ್ಷಿಣ ಕೊರಿಯಾ ಈಗ ಗಡಿಯುದ್ದಕ್ಕೂ ಧ್ವನಿವರ್ಧಕ ಪ್ರಸಾರವನ್ನು ಪುನರಾರಂಭಿಸಿದ್ದರಿಂದ ಪರಿಸ್ಥಿತಿ ಬದಲಾಗಿದ್ದು, ನಮ್ಮ ನಿಲುವುಗಳು ಕೂಡ ಬದಲಾಗಬಹುದು ಎಂದು ಕಿಮ್ ಹೇಳಿದರು.
"ಮತ್ತಷ್ಟು ಮುಖಾಮುಖಿ ಬಿಕ್ಕಟ್ಟನ್ನು ತರುವ ಅಪಾಯಕಾರಿ ಕೃತ್ಯವನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಸ್ವತಃ ತನ್ನ ವರ್ತನೆಯನ್ನು ತಿದ್ದಿಕೊಳ್ಳುವಂತೆ ನಾನು ಸಿಯೋಲ್ಗೆ ಕಠಿಣ ಎಚ್ಚರಿಕೆ ನೀಡುತ್ತೇನೆ" ಎಂದು ಅವರು ಹೇಳಿದರು.
ದಕ್ಷಿಣ ಕೊರಿಯಾದ ಸಮಾಜದಲ್ಲಿ ಆತಂಕ ಮತ್ತು ಗೊಂದಲವನ್ನು ಪ್ರಚೋದಿಸುವ ಉತ್ತರ ಕೊರಿಯಾದ ಯಾವುದೇ ಪ್ರಯತ್ನಗಳಿಗೆ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸಿಯೋಲ್ನ ಏಕೀಕರಣ ಸಚಿವಾಲಯ (unification ministry) ತಿಳಿಸಿದೆ. "ನಮ್ಮ ಸರಿಯಾದ ಪ್ರತಿಕ್ರಿಯೆಯನ್ನು ಪ್ರಚೋದನೆಗೆ ನೆಪವಾಗಿ ಬಳಸುವ ತಪ್ಪನ್ನು ಉತ್ತರ ಕೊರಿಯಾ ಮಾಡಬಾರದು" ಎಂದು ಸಚಿವಾಲಯದ ವಕ್ತಾರ ಕೂ ಬ್ಯೋಂಗ್-ಸ್ಯಾಮ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ : 8 ತಿಂಗಳಿಂದ ಹಮಾಸ್ ವಶದಲ್ಲಿದ್ದ ನಾಲ್ವರು ಒತ್ತೆಯಾಳುಗಳನ್ನು ರಕ್ಷಿಸಿದ ಇಸ್ರೇಲಿ ಸೈನ್ಯ - Israel rescues four hostages